ಸಿಡ್ನಿ: ವರ್ಷದ ಎರಡನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಎಚ್.ಎಸ್ ಪ್ರಣಯ್ಗೆ(H.S. Prannoy) ನಿರಾಸೆಯಾಗಿದೆ. ಆಸ್ಟ್ರೇಲಿಯನ್ ಓಪನ್(Australian Open) ಸೂಪರ್ 500 ಬ್ಯಾಡ್ಮಿಂಟನ್(Australian Open 2023 Badminton) ಟೂರ್ನಿಯ ಫೈನಲ್ನಲ್ಲಿ ಸೋಲು ಕಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ.24, ಚೀನಾದ ವೆಂಗ್ ಹೊಂಗ್ ಯಾಂಗ್(Weng Hong Yang) ವಿರುದ್ಧ ಭಾರಿ ಹೋರಾಟ ನಡೆಸಿದರೂ 9-21, 23-21, 20-22 ಅಂತರದಿಂದ ಸೋಲು ಕಂಡರು. ಅವರ ಸೋಲಿನಿಂದ ಈ ಟೂರ್ನಿಯಲ್ಲಿ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ ಭಾರತಕ್ಕೆ ನಿರಾಸೆಯಾಯಿತು. ಭಾರತೀಯರು ಈವರೆಗೆ ಈ ಪಂದ್ಯಾವಳಿಯಲ್ಲಿ 3 ಬಾರಿ ಚಾಂಪಿಯನ್ ಆಗಿದ್ದಾರೆ. 2014, 2016ರಲ್ಲಿ ಸೈನಾ ನೆಹ್ವಾಲ್, 2017ರಲ್ಲಿ ಕಿದಂಬಿ ಶ್ರೀಕಾಂತ್ ಪ್ರಶಸ್ತಿ ಗೆದ್ದಿದ್ದರು.
ಮೊದಲ ಗೇಮ್ನಲ್ಲಿ ಸಂಪೂರ್ಣ ವಿಫಲರಾದ ಎಚ್.ಎಸ್ ಪ್ರಣಯ್ ಕೇವಲ 9 ಅಂಕಕ್ಕೆ ಸೀಮಿತರಾದರು. ಆದರೆ ದ್ವಿತೀಯ ಗೇಮ್ನಲ್ಲಿ ಫಿನಿಕ್ಸ್ನಂತೆ ಎದ್ದು ಬಂದು ಗೆಲುವು ಸಾಧಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಅಂತಿಮ ಗೇಮ್ನಲ್ಲಿಯೂ ಗೆಲುವಿನಂಚಿನವರೆಗೂ ಸಾಗಿದರೂ ಅದೃಷ್ಟ ಚೀನಾ ಆಟಗಾರನಿಗೆ ಒಲಿಯಿತು. 20-22 ಅಂತರದಿಂದ ಅಂತಿಮ ಗೇಮ್ ಕಳೆದುಕೊಂಡರು.
ಇದೇ ವರ್ಷದ ಮೇ ಯಲ್ಲಿ ನಡೆದ ಮಲೇಷ್ಯಾ ಓಪನ್ ಫೈನಲ್ನಲ್ಲಿ ಪ್ರಣಯ್ ಅವರು ವೆಂಗ್ ಹೊಂಗ್ ಯಾಂಗ್ ವಿರುದ್ಧ ಗೆದ್ದು 6 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡಿದ್ದರು. ಇದೇ ಸೋಲಿನ ಸೇಡನ್ನು ಹೊಂಗ್ ಯಾಂಗ್ ಇದೀಗ ಆಸ್ಟ್ರೇಲಿಯನ್ ಓಪನ್‌ನಲ್ಲಿ ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ Australian Open: ಸಿಂಧುಗೆ ಸೋಲು; ಸೆಮಿಫೈನಲ್ ತಲುಪಿದ ಪ್ರಣಯ್,ಪ್ರಿಯಾಂಶು
ಶನಿವಾರ ನಡೆದಿದ್ದ ಸೆಮಿಫೈನಲ್ನಲ್ಲಿ ಪ್ರಣಯ್ ಅವರು ಭಾರತದವರೇ ಆದ 21 ವರ್ಷದ ಪ್ರಿಯಾಂಶು ರಾಜಾವತ್ ವಿರುದ್ಧ 21-18 21-12 ನೇರ ಗೇಮ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದ್ದರು. ಇದಕ್ಕೂ ಮುನ್ನ ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ನಲ್ಲಿ ಭಾರಿ ಹೋರಾಟ ನಡೆಸಿ ಇಂಡೋನೇಷ್ಯನ್ ಆಟಗಾರ ಆ್ಯಂಟನಿ ಸಿನಿಸುಕ ಗಿಂಟಿಂಗ್ ಅವರಿಗೆ 16-21, 21-17, 21-14ರಿಂದ ಸೋಲುಣಿಸಿದ್ದರು.