Site icon Vistara News

Australian Open 2024: ಫೆಡರರ್ ದಾಖಲೆ ಸರಿಗಟ್ಟಿದ ನೊವಾಕ್ ಜೊಕೊವಿಕ್

novak djokovic

ಸಿಡ್ನಿ: ಸರ್ಬಿಯನ್‌ ಟೆನಿಸಿಗ ನೊವಾಕ್‌ ಜೊಕೋವಿಕ್‌(Novak Djokovic) ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್(Australian Open 2024) ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಇದೇ ವೇಳೆ ದಿಗ್ಗಜ ರೋಜರ್ ಫೆಡರರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಜೊಕೊವಿಕ್​ 6-0, 6-0, 6-3 ಅಂತರದಿಂದ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಉಭಯ ಆಟಗಾರರ ಈ ಸೆಣಸಾಟ 1 ಗಂಟೆ 44 ನಿಮಿಷಗಳ ವರೆಗೆ ಸಾಗಿತು.

ಜೋಕೊ ಈ ಪಂದ್ಯ ಗೆದ್ದು ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಒಟ್ಟಾರೆ 58ನೇ ಬಾರಿ ಕ್ವಾರ್ಟರ್​ ಫೈನಲ್​ ಪ್ರವೇಶ ಪಡೆದ ಫೆಡರರ್ ದಾಖಲೆ ಸರಿಗಟ್ಟಿದರು. ಆಸ್ಟ್ರೇಲಿಯಾ ಓಪನ್‌ನಲ್ಲಿ ಜೋಕೊ ಅವರ 14ನೇ ಕ್ವಾರ್ಟರ್‌ ಫೈನಲ್ ಇದಾಗಿದೆ. ಜೋಕೊ ಮುಂದಿನ ಸುತ್ತಿನಲ್ಲಿ 12ನೇ ಶ್ರೇಯಾಂಕದ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಎದುರಿಸಲಿದ್ದಾರೆ.

ಟೇಲರ್ ಫ್ರಿಟ್ಜ್ ಅವರು ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 7-6 (3), 5-7, 6-3, 6-3 ಸೆಟ್ ಗಳಿಂದ ಜಯಗಳಿಸಿ ಮೊದಲ ಬಾರಿಗೆ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಅನುಭವಿ ಆಟಗಾರನಿಗೆ ಸೋಲಿನ ಆಘಾತ ನಿಡುವರೇ ಎಂದು ಕಾದು ನೋಡಬೇಕಿದೆ.

ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅರಿನಾ ಸೆಬಲೆಂಕಾ ಮತ್ತು ಅಮೆರಿಕ ಓಪನ್ ವಿಜೇತರಾದ ಕೊಕೊ ಗಾಫ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 2ನೇ ಶ್ರೇಯಾಂಕಿತ ಆಟಗಾರ್ತಿ ಸಬಲೆಂಕಾ, ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು 6-3, 6-2 ಸೆಟ್ ಗಳಿಂದ ಸೋಲಿಸಿದರು. ಕೊಕೊ ಅವರು ಮ್ಯಾಗ್ಡಲೀನಾ ಫ್ರೆಚ್ ಅವರನ್ನು 6-1, 6-2 ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಕೊಕೊ ಗಾಫ್​ ಮುಂದಿನ ಪಂದ್ಯದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿರುವ ಉಕ್ರೇನ್​ನ ಮಾರ್ಟಾ ಕೊಸ್ಟ್ಯುಕ್ ಸವಾಲು ಎದುರಿಸಲಿದ್ದಾರೆ.

ವಿಶ್ವದ ನಂಬರ್‌ ವನ್‌ ಇಗಾ ಸ್ವಿಯಾಟೆಕ್‌ ಅವರು ಶನಿವಾರ ನಡೆದಿದ್ದ ಮೂರನೇ ಸುತ್ತಿನ ಹೋರಾಟದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು. ಸ್ವಿಯಾಟೆಕ್‌ ಅವರನ್ನು ಜೆಕ್‌ ಗಣರಾಜ್ಯದ ಹದಿಹರೆಯದ ಲಿಂಡಾ ನೋಸ್ಕೋವಾ ಅವರು 3-6, 6-3, 6-4 ಸೆಟ್‌ಗಳಿಂದ ಉರುಳಿಸಿದ್ದರು.

Exit mobile version