ಮೆಲ್ಬೋರ್ನ್: ಕೊನೆಯ ಗ್ರ್ಯಾನ್ ಸ್ಲಾಮ್ ಆಡುತ್ತಿರುವ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆಲುವಿನ ಶುಭಾರಂಭ ಕಂಡಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಕಣಕ್ಕಿಳಿದಿರುವ ಅವರು ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ.
ಗುರುವಾರ ನಡೆದ ವನಿತಾ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕಜಕಿಸ್ತಾನದ ಅನ್ನಾ ಡ್ಯಾನಿಲಿನಾ ಅವರೊಂದಿಗೆ ಆಡಿದ ಸಾನಿಯಾ ಮಿರ್ಜಾ ಅಮೆರಿಕದ ಬರ್ನಾರ್ಡ್ ಪೆರಾ-ಹಂಗೇರಿಯ ದಲ್ಮಾ ಗಾಲ್ಫಿ ಅವರನ್ನು 6-2, 7-5 ನೇರ ಸೆಟ್ಗಳಿಂದ ಹಿಮ್ಮೆಟ್ಟಿಸಿತು.
ಸಾನಿಯಾ-ಡ್ಯಾನಿಲಿನಾ ಜೋಡಿ ದ್ವಿತೀಯ ಸುತ್ತಿನಲ್ಲಿ ಅನೆಲಿನಾ ಕಲಿನಿನಾ (ಉಕ್ರೇನ್)-ಅಲಿಸನ್ ವಾನ್ ಯುಟ್ವಾಂಕ್ (ಬೆಲ್ಜಿಯಂ) ಸವಾಲನ್ನು ಎದುರಿಸಲಿದ್ದಾರೆ. 36 ವರ್ಷದ ಸಾನಿಯಾ ಮಿರ್ಜಾ ಮಿಕ್ಸೆಡ್ ಡಬಲ್ಸ್‌ನಲ್ಲೂ ಆಡಲಿದ್ದು, ಇಲ್ಲಿ ಭಾರತದವರೇ ಆದ ರೋಹನ್ ಬೋಪಣ್ಣ ಜತೆ ಆಡಲಿದ್ದಾರೆ.
ವಿದಾಯ ಟೂರ್ನಿಯನ್ನಾಡುತ್ತಿರುವ ಸಾಮಿಯಾ ಮಿರ್ಜಾ ದ್ವಿತೀಯ ಸುತ್ತಿನಲ್ಲಿಯೂ ಮೇಲುಗೈ ಸಾಧಿಸಿ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದ್ದಾರೆ. ಜತೆಗೆ ತಮ್ಮ ಉತ್ಕೃಷ್ಟ ಮಟ್ಟದ ಆಟವನ್ನು ಅವರು ಇಲ್ಲಿ ತೋರ್ಪಡಿಸುತ್ತಿದ್ದಾರೆ. ಕಳೆದ ಪಂದ್ಯದ ಫಲಿತಾಂಶವೇ ಇದಕ್ಕೆ ಉತ್ತಮ ನಿದರ್ಶನ. ಕೋರ್ಟ್ನ ಮೂಲೆ ಮೂಲೆಗೂ ಓಡಿ ಬಲಿಷ್ಠ ಹೊಡೆತಗಳ ಮೂಲಕ ಅಂಕ ಗಳಿಸಿದರು. ಒಟ್ಟಾರೆ ಸಾನಿಯಾ ಅವರ ಆಟವನ್ನು ಗಮನಿಸುವಾಗ ಅಂತಿಮ ಗ್ರ್ಯಾನ್ ಸ್ಲಾಮ್ನಲ್ಲಿ ಪ್ರಶಸ್ತಿ ಗೆದ್ದು ತಮ್ಮ ಟೆನಿಸ್ ವೃತ್ತಿ ಜೀವನವನ್ನು ಸ್ಮರಣೀಯಗೊಳಿಸುವ ಪಣ ತೊಟ್ಟಂತೆ ಕಾಣುತ್ತಿದೆ.
ಇದನ್ನೂ ಓದಿ | Sania Mirza | ಕೊನೆಯ ಗ್ರ್ಯಾನ್ ಸ್ಲಾಮ್ ಟೂರ್ನಿಗೂ ಮುನ್ನ ಭಾವನಾತ್ಮಕ ಪತ್ರ ಬರೆದ ಸಾನಿಯಾ ಮಿರ್ಜಾ