Site icon Vistara News

Australian Open: ಸಿಂಧುಗೆ ಸೋಲು; ಸೆಮಿಫೈನಲ್​ ತಲುಪಿದ ಪ್ರಣಯ್​,ಪ್ರಿಯಾಂಶು

Priyanshu Rajawat blows away senior compatriot Kidambi Srikanth

ಸಿಡ್ನಿ: ಭಾರತದ ಅನುಭವಿ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧು(PV Sindhu) ಅವರ ವೈಫಲ್ಯ ಆಸ್ಟ್ರೇಲಿಯಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿಯೂ(Australian Open 2023 badminton) ಮುಂದುವರಿದಿದೆ. ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ವಿಶ್ವದ 12ನೇ ಶ್ರೇಯಾಂಕಿತ ಆಟಗಾರ್ತಿ ಬೀವೆನ್‌ ಜಾಂಗ್‌ ವಿರುದ್ಧ ನೇರ ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಸಿಂಧು ಅವರ ಸೆಮಿಫೈನಲ್ ಆಸೆ ಭಗ್ನಗೊಂಡಿದೆ.

ಪಂದ್ಯಾವಳಿಯ ಮೊದಲ ಎರಡು ಸುತ್ತುಗಳಲ್ಲಿ ತನ್ನದೇ ದೇಶದ ಅಶ್ಮಿತಾ ಚಲಿಹಾ ಮತ್ತು ಆಕರ್ಷಿ ಕಶ್ಯಪ್ ಅವರನ್ನು ಸಿಂಧು ಮಣಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದರು. ಆದರೆ ಇಲ್ಲಿ ಹೀನಾಯ ಸೋಲು ಕಂಡು ನಿರಾಸೆ ಮೂಡಿಸಿದ್ದಾರೆ. ಕಳೆದೊಂದು ವರ್ಷಗಳಿಂದ ಸಿಂಧು ಅವರು ನಿರೀಕ್ಷಿತ ಮಟ್ಟದ ಹೋರಾಟ ನಡೆಸುವಲ್ಲಿ ಸಂಪೂರ್ಣ ವಿಫಲರಾಗುತ್ತಲೇ ಬರುತ್ತಿದ್ದಾರೆ. ಹೀಗಾಗಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ಮೇಲಿನ ನಿರೀಕ್ಷೆ ಕುಂಟಿತಗೊಂಡಿದೆ.

39 ನಿಮಿಷದ ಹೋರಾಟದಲ್ಲಿ ಸಿಂಧು ಅಮೆರಿಕದ ಬೀವೆನ್‌ ಜಾಂಗ್​ಗೆ ಯಾವುದೇ ಹಂತದಲ್ಲಿಯೂ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. 12-21 17-21 ನೇರ ಸೆಟ್‌ಗಳಿಂದ ಸಿಂಧು ಪರಾಭವಗೊಂಡರು. ಅದರಲ್ಲೂ ಮೊದಲ ಗೇಮ್​ನಲ್ಲಿ ಬಾರಿ ಕಷ್ಟಪಟ್ಟು 10 ಅಂಕ ದಾಟಿದರು. ಉಭಯ ಆಟಗಾರ್ತಿಯರು ಇದುವರೆಗೆ 10 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಸಿಂಧು ಆರು ಬಾರಿ ಗೆದ್ದಿದ್ದರು. ಆದರೆ ಈ ಬಾರಿ ಸೋಲು ಕಂಡರು.

ಪುರುಷರ ಸಿಂಗಲ್ಸ್​ನ ಕ್ವಾರ್ಟರ್​ ಫೈನಲ್​ನಲ್ಲಿ ಎಚ್‌.ಎಸ್‌. ಪ್ರಣಯ್‌(HS Prannoy) ಮತ್ತು ಪ್ರಿಯಾಂಶು ರಾಜಾವತ್‌(Priyanshu Rajawat)​ ಗೆಲುವು ದಾಖಲಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಸೆಮಿಫೈನಲ್​ನಲ್ಲಿ ಉಭಯ ಆಟಗಾರರೇ ಮುಖಾಮುಖಿಯಾಗಲಿದ್ದಾರೆ. ಶುಕ್ರವಾರದ ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಎಚ್‌.ಎಸ್‌. ಪ್ರಣಯ್‌ ಇಂಡೋನೇಶ್ಯದ ಆಂಥೋನಿ ಸಿನಿಸುಕಾ ಗಿಂಟಿಂಗ್ ಅವರನ್ನು ಮೂರು ಗೇಮ್​ಗಳ ಮ್ಯಾರಥಾನ್​ ಹೋರಾಟದಲ್ಲಿ 16-21, 21-17, 21-14 ಅಂತರದಿಂದ ಕೆಡವಿದರು.

ಇದನ್ನೂ ಓದಿ Australian Open 2023: ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಕನ್ನಡಿಗ ಮಂಜುನಾಥ್

ಮತ್ತೊಂದು ಕ್ವಾರ್ಟರ್​ ಫೈನಲ್​ನಲ್ಲಿ ಪ್ರಿಯಾಂಶು ರಾಜಾವತ್‌ ಭಾರತದವರೇ ಆದ ಅನುಭವಿ ಕೆ. ಶ್ರೀಕಾಂತ್(Kidambi Srikanth)​ ವಿರುದ್ಧ  21-13, 21-8 ನೇರ ಗೇಮ್​ಗಳಿಂದ ಗೆದ್ದು ಬೀಗಿದರು. ಈ ಗೆಲುವಿನೊಂದಿಗೆ ಸೆಮಿಫೈನಲ್​ ತಲುಪಿರುವ 21 ವರ್ಷದ ಪ್ರಿಯಾಂಶು ರಾಜಾವತ್‌ ಸೆಮಿಯಲ್ಲಿಯೂ ಗೆದ್ದು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

Exit mobile version