ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕ ದಿನ ಸರಣಿ ಮುಕ್ತಾಯಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ಆಟಗಾರರು ಫುಲ್ ಆರಾಮದಲ್ಲಿದ್ದಾರೆ. ಏತನ್ಮಧ್ಯೆ, ವೇಗದ ಬೌಲಿಂಗ್ ದಾಳಿಯ ಮೂಲಕ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿರುವ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮಹಿಳೆಯರ ಪ್ರಿಮಿಯರ್ ಲೀಗ್ನ (WPL 2023) ಯುಪಿ ವಾರಿಯರ್ಸ್ ಕ್ಯಾಂಪ್ ಸೇರಿಕೊಂಡು ಪತ್ನಿಯ ಬರ್ತ್ ಡೇ ಆಚರಿಸಿದ್ದಾರೆ. ಮಹಿಳೆಯರ ತಂಡದ ಕ್ಯಾಂಪ್ ಸೇರಿಕೊಂಡು ಪತ್ನಿಯ ಬರ್ತ್ಡೇ ಆಚರಣೆ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಸರಳ. ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸಾ ಹೀಲಿ, ಮಿಚೆಲ್ ಸ್ಟಾರ್ಕ್ ಪತ್ನಿ. ಹೀಗಾಗಿ ಪತ್ನಿಯ ಜನುಮದಿನದಂದು ಅಲ್ಲಿಗೆ ಹೋಗಿ ಕೇಕ್ ಕಟ್ ಮಾಡಿದ್ದಾರೆ.
ಅಲಿಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ ಪ್ಲೇಆಫ್ ಹಂತಕ್ಕೇರಿದೆ. ಲೀಗ್ ಹಂತದಲ್ಲಿ ಮೂರನೇ ಸ್ಥಾನ ಪಡೆದುಕೊಂಡ ಯುಪಿ ಬಳಗ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಬೇಕಾಗಿದೆ. ಅದಕ್ಕೂ ಮೊದಲು ಅವರು ತಮ್ಮ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಪತಿ ಮಿಚೆಲ್ ಸ್ಟಾರ್ಕ್ ಕೂಡ ಹಾಜರಿದ್ದರು. ಕೇಕ್ ಕಟ್ ಮಾಡಿದ ಮಿಚೆಲ್ ಸ್ಟಾರ್ಕ್ ಅದನ್ನು ಪತ್ನಿಗೆ ತಿನ್ನಿಸಿ ಬಳಿಕ ಅವರ ಮುಖಕ್ಕೂ ಹಚ್ಚಿ ಸಂಭ್ರಮಪಟ್ಟಿದ್ದಾರೆ.
ಇದನ್ನೂ ಓದಿ : WPL 2023: ಮುಂಬೈ vs ಯುಪಿ ವಾರಿಯರ್ಸ್ ಎಲಿಮಿನೇಟರ್ ಕಾದಾಟ; ಯಾರಿಗೆ ಒಲಿಯಲಿದೆ ಫೈನಲ್ ಅದೃಷ್ಟ
ಅಲಿಸಾ ಹೀಲಿ ಯುಪಿ ವಾರಿಯರ್ಸ್ ತಂಡದ ಆರಂಭಿಕ ಬ್ಯಾಟರ್. ಅವರು ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಆಸ್ಟ್ರೇಲಿಯಾ ತಂಡದ ಪರವಾಗಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಾರೆ. ಹೀಗಾಗಿ ಯುಪಿ ತಂಡ ಹರಾಜಿನಲ್ಲಿ 70 ಲಕ್ಷ ರೂಪಾಯಿ ನೀಡಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಜತೆಗೆ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನೂ ನೀಡಿತ್ತು.
ನೇರವಾಗಿ ಫೈನಲ್ ಪ್ರವೇಶಿಸಿದ ಡೆಲ್ಲಿ ತಂಡ
ಮಹಿಳೆಯರ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ತಲುಪಿದೆ. ಶುಕ್ರವಾರ ಯುಪಿ ವಾರಿಯರ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ಪ್ಲೇಆಫ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ಮಾರ್ಚ್ 26ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಳಗವನ್ನು ಎದುರಿಸಲಿದೆ. ಅಂದ ಹಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಿದೆ. ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಡೆಲ್ಲಿ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂದು ಬಿಸಿಸಿಐ ಹೇಳಿದೆ. ಪಂದ್ಯಗಳ ವೀಕ್ಷಣೆಗೆ ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.