Site icon Vistara News

ವಿಶ್ವದಲ್ಲೇ ರೋಹಿತ್​ ಶರ್ಮ ಅತ್ಯಂತ ನತದೃಷ್ಟ ವ್ಯಕ್ತಿ ಎಂದ ಟ್ರಾವಿಸ್​ ಹೆಡ್​

rohit sharma

ಅಹಮದಾಬಾದ್​: ಭಾನುವಾರ ನಡೆದ ಏಕದಿನ ವಿಶ್ವಕಪ್(ICC Cricket World Cup 2023)​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿ ಭಾರತದ ಗೆಲುವನ್ನು ಕಸಿದ ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್​ ಹೆಡ್​​(Travis Head) ಅವರು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ(Rohit Sharma unluckiest man) ಎಂದು ಹೇಳಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವೇಳೆ ಹೆಡ್​​ ಅವರು ಈ ಮಾತನ್ನು ಹೇಳಿದರು. “ಬಹುಶಃ ರೋಹಿತ್​ ಶರ್ಮ ವಿಶ್ವದ ಅತ್ಯಂತ ದುರದೃಷ್ಟಕರ ವ್ಯಕ್ತಿ” ಯಾರೂ ಕೂಡ ಊಹೆ ಮಾಡಿರಲಿಲ್ಲ ನಾನು ಈ ಕ್ಯಾಚ್​ ಹಿಡಿಯುತ್ತೇನೆ ಎಂದು. ಆದರೆ, ಇದು ಸಾಧ್ಯವಾಯಿತು. ಒಂದೊಮ್ಮೆ ನಾನು ಕ್ಯಾಚ್​ ಬಿಟ್ಟಿದ್ದರೆ ರೋಹಿತ್​ ಶರ್ಮ ಶತಕ ಬಾರಿಸುವ ಸಾಧ್ಯತೆಯೂ ಇರುತ್ತಿತ್ತು. ನಿಜಕ್ಕೂ ಇದೊಂದು ಅಸಾಧಾರಣ ದಿನವಾಗಿದೆ” ಎಂದರು.

ಟ್ರಾವಿಸ್​ ಹೆಡ್​​ ಅವರು ಈ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಈ ಅಸಾಮಾನ್ಯ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದು ಹೆಡ್​​ ಅವರ 2ನೇ ವಿಶ್ವಕಪ್​ ಶತಕವಾಗಿದೆ. ಮೊದಲ ಶತಕ ಇದೇ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ದಾಖಲಿಸಿದ್ದರು.

6ನೇ ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾ

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

ಇದನ್ನೂ ಓದಿ ‘ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ’; ಸೋಲಿಗೆ ಕಾರಣ ತಿಳಿಸಿದ ರೋಹಿತ್​

ಈಡೇರದ 2003ರ ವಿಶ್ವ ಕಪ್​ ಫೈನಲ್​ ಸೋಲಿನ ಸೇಡು

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

Exit mobile version