ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್- ಗವಾಸ್ಕರ್ ಟ್ರೋಫಿಗೆ (Border- Gavaskar Trophy) ವೇದಿಕೆ ಸಜ್ಜುಗೊಂಡಿದೆ. ಫೆಬ್ರವರಿ 9ರಂದು ಮೊದಲ ಪಂದ್ಯ ಆರಂಭಗೊಳ್ಳಲಿದ್ದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ನಲ್ಲಿ ಹಣಾಹಣಿ ನಡೆಯಲಿದೆ. ಏತನ್ಮಧ್ಯೆ, ಎರಡೂ ದೇಶಗಳ ನಡುವಿನ ಹಿರಿಯ ಆಟಗಾರರ ಗೆಲುವು ನಮ್ಮದೇ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಏತನ್ಮಧ್ಯೆ, ಇತ್ತಂಡಗಳು ಎದುರಾಳಿ ತಂಡದ ಯಾವ ಆಟಗಾರ ನಮಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲರು ಎಂಬ ಚರ್ಚೆ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ, ನಮಗೆ ಆರ್. ಅಶ್ವಿನ್ ಅವರದ್ದೇ ಭಯ ಎಂದು ಹೇಳಿದ್ದಾರೆ.
ಉಸ್ಮಾನ್ ಖವಾಜ ಕಳೆದ ಎರಡು ವರ್ಷಗಳಿಂದ ಉತ್ತಮ ಫಾರ್ಮ್ನಲ್ಲಿದ್ದು, ಡೇವಿಡ್ ವಾರ್ನರ್ ಜತೆ ಇನಿಂಗ್ಸ್ ಅರಂಭಿಸಲಿದ್ದಾರೆ. ಆದರೆ, ಪಾಕಿಸ್ತಾನ ಮೂಲದ ಅವರಿಗೆ ಭಾರತಕ್ಕೆ ಬರುವುದಕ್ಕೆ ವೀಸಾ ಸಮಸ್ಯೆಯಾಗಿತ್ತು. ಬಳಿಕ ಬೆಂಗಳೂರಿಗೆ ಬಂದು ಅಭ್ಯಾಸ ಆರಂಭಿಸಿದ್ದರು. ಈ ವೇಳೆ ಮಾತನಾಡಿದ ಅವರು, ಭಾರತದಲ್ಲಿ ಆಡುವುದು ವಿಶೇಷ ಅನುಭವವಾಗಿದೆ. ಇಲ್ಲಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಹೆಚ್ಚು ಪ್ರೌಢಿಮೆಯಿಂದ ಕೂಡಿರುತ್ತದೆ, ಎಂದು ಹೇಳಿದರು.
ಕಳೆದ 10 ವರ್ಷಗಳಿಂದ ನಾವು ಭಾರತದಲ್ಲಿ ಯಾವ ರೀತಿಯ ಟೆಸ್ಟ್ ಪಿಚ್ಗಳು ಇರುತ್ತವೆ ಎಂಬುದು ನಮಗೆ ಅರಿವಿದೆ. ಅದಕ್ಕೆ ತಕ್ಕಂತೆ ನಾವು ತಯಾರಿ ನಡೆಸಿಕೊಂಡಿದ್ದೇವೆ. ಆದರೆ, ಇಲ್ಲಿನ ಪಂದ್ಯದಲ್ಲಿ ನಮಗೆ ಅಶ್ವಿನ್ ಅವರದ್ದೇ ಭಯ ಎಂದು ಹೇಳಿದ್ದಾರೆ.
ಇದನ್ನೂ ಓದಿ : Border- Gavaskar Trophy : ಆಸೀಸ್ ಬಳಗಕ್ಕೆ ಗಾಯದ ಬರೆ, ಜೋಶ್ ಹೇಜಲ್ವುಡ್ ಸರಣಿಗೆ ಅಲಭ್ಯ?
ಅಶ್ವಿನ್ ಅವರು ಪ್ರಖರ ಬೌಲಿಂಗ್ ದಾಳಿ ನಡೆಸಬಲ್ಲವರು. ಅವರ ಕೌಶಲವೂ ಉನ್ನತ ಮಟ್ಟದಲ್ಲಿದೆ. ಅವರು ಬೌಲಿಂಗ್ನಲ್ಲಿ ಸಾಕಷ್ಟು ಏರಿಳಿತವನ್ನು ಸಾಧಿಸಬಲ್ಲವರು. ಹೀಗಾಗಿ ಅವರನ್ನು ಎದುರಿಸುವುದು ನಮಗೆ ಕಷ್ಟದ ವಿಚಾರ ಎಂದು ಖವಾಜ ಹೇಳಿದ್ದಾರೆ.