ಲಂಡನ್: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜೋಶ್ ಹೇಜಲ್ವುಡ್ (Josh Hazlewood) ಗಾಯದ ಸಮಸ್ಯೆಯ ಕಾರಣ ಜೂನ್ 7ರಂದು ಆರಂಭವಾಗಲಿರುವ ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಿಂದ (WTC Final 2023) ಹೊರಗುಳಿದಿದ್ದಾರೆ. ಆಲ್ರೌಂಡರ್ ಮೈಕೆಲ್ ನೇಸರ್ ಅವರನ್ನು ಬದಲಿ ಆಟಗಾರನಾಗಿ ಆಸ್ಟ್ರೇಲಿಯಾ ಹೆಸರಿಸಿದೆ. ಬಲಗೈ ವೇಗದ ಬೌಲರ್ ಗಾಯದ ಸಮಸ್ಯೆಯ ಕಾರಣಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಅಭಿಯಾನವನ್ನು ತಡವಾಗಿ ಆರಂಭಿಸಿದ್ದರು. ಬಳಿಕ ನೋವು ಪುನರಾವರ್ತನೆಗೊಂಡು ಅರ್ಧದಲ್ಲೇ ಆಟ ಮೊಟಕುಗೊಳಿಸಿದ್ದರು.
33ರ ವರ್ಷದ ಆಲ್ರೌಂಡರ್ ನೇಸರ್ ಆಸ್ಟ್ರೇಲಿಯಾ ಪರ ಎರಡು ಟೆಸ್ಟ್ ಮತ್ತು ಅಷ್ಟೇ ಸಂಖ್ಯೆ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಇತ್ತೀಚೆಗೆ ಇಂಗ್ಲಿಷ್ ಕಂಟ್ರಿ ಚಾಂಪಿಯನ್ಷಿಪ್ನಗ್ಲಾಮೋರ್ಗನ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಿಂದ 19 ವಿಕೆಟ್ಗಳನ್ನು ಉರುಳಿಸಿದ್ದರು. ಆದರೆ ಇತ್ತೀಚಿನ ಡಿವಿಷನ್ 2 ಸ್ಪರ್ಧೆಯಲ್ಲಿ ಸಸೆಕ್ಸ್ ವಿರುದ್ಧ ಶತಕ ಬಾರಿಸಿದ್ದರು.
ಇದನ್ನೂ ಓದಿ : WTC Final 2023 : ಡಬ್ಲ್ಯುಟಿಸಿ ಫೈನಲ್ಗೂ ಮೊದಲೇ ಟೆಸ್ಟ್ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್
ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾದ ಮೂರನೇ ಆಯ್ಕೆಯ ವೇಗದ ಬೌಲರ್ ಆಗಿ ಸ್ಕಾಟ್ ಬೋಲ್ಯಾಂಡ್ ಅವರೊಂದಿಗೆ ನೇಸರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೋಲ್ಯಾಂಡ್ ತನ್ನ ದೇಶಕ್ಕಾಗಿ ಕೇವಲ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ 13.42 ಸರಾಸರಿಯಲ್ಲಿ 28 ವಿಕೆಟ್ಗಳನ್ನು ಉರುಳಿಸಿದ್ದಾರೆ. ಏತನ್ಮಧ್ಯೆ, ಜೂನ್ 16 ರಂದು ಬರ್ಮಿಂಗ್ಹಮ್ನಲ್ಲಿ ಪ್ರಾರಂಭವಾಗಲಿರುವ ಆಶಸ್ ಸರಣಿಗೆ ಹೇಜಲ್ವುಡ್ ಮರಳುವ ನಿರೀಕ್ಷೆಯಿದೆ.
ತಂಡ ಇಂತಿದೆ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯೇರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.
ಮೀಸಲು ಆಟಗಾರರು: ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್ಶಾ