Site icon Vistara News

Avesh Khan : ಭಾರತ ತಂಡದಿಂದ ಏಕಾಏಕಿ ಹೊರಗೆ ನಡೆದ ಆವೇಶ್ ಖಾನ್​

Avesh Khan

ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ (Ind vs eng) ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಭಾರತ ತಂಡದ ಮೇಲುಗೈ ಸಾಧಿಸುತ್ತಿದೆ. ಭಾರತದ ಸ್ಪಿನ್ನರ್​ಗಳು ಮಿಂಚುವ ಜತೆ ಬ್ಯಾಟಿಂಗ್​ನಲ್ಲಿ ಯಶಸ್ವಿ ಜೈಸ್ವಾಲ್ ಸಂಚಲನ ಮೂಡಿಸಿದ್ದಾರೆ. ಏತನ್ಮಧ್ಯೆ ತಂಡದಿಂದ ವೇಗದ ಬೌಲರ್​ ಆವೇಶ್ ಖಾನ್​ಗೆ (Avesh Khan) ಕೊಕ್​ ನೀಡಲಾಗಿದೆ. ಅವರನ್ನು ಏಕಾಏಕಿ ತಂಡದಿಂದ ಬಿಟ್ಟು ಕಳುಹಿಸಲಾಗಿದೆ. ಅವರೀಗ ಮಧ್ಯಪ್ರದೇಶದ ತಂಡದ ಪರವಾಗಿ ಆಡಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೂವರು ಫಿಂಗರ್ ಸ್ಪಿನ್ನರ್ ಗಳು ಮತ್ತು ಇಬ್ಬರು ವೇಗಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಮೂವರು ಸ್ಪಿನ್ನರ್ ಗಳಾಗಿದ್ದರೆ, ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ವೇಗದ ಬೌಲರ್ ಗಳಾಗಿದ್ದಾರೆ. ಮೊದಲ ಎರಡು ಟೆಸ್ಟ್​ನಲ್ಲಿ ಅವೇಶ್ ಖಾನ್​ಗೆ ಯಾವುದೇ ಆಟದ ಸಮಯ ಸಿಗುವುದಿಲ್ಲ. ಪರಿಣಾಮವಾಗಿ ದೇಶೀಯ ಕ್ರಿಕೆಟ್ ಆಡಲು ಅವರನ್ನು ಬಿಡುಗಡೆ ಮಾಡಲಾಗಿದೆ. ಅವರೀಗ ಮಧ್ಯಪ್ರದೇಶ ರಣಜಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆವೇಶ್ ಖಾನ್ ಭಾರತ ಪರ 8 ಏಕದಿನ ಹಾಗೂ 19 ಟಿ20 ಪಂದ್ಯಗಳನ್ನಾಡಿದ್ದಾರೆ. ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಮೊಹಮ್ಮದ್ ಶಮಿ ಅವರ ಬದಲಿಯಾಗಿ ಅವರು ಈ ಸರಣಿಯಲ್ಲಿ ತಮ್ಮ ಮೊದಲ ಟೆಸ್ಟ್ ಕರೆಯನ್ನು ಪಡೆದುಕೊಂಡಿದ್ದರು. ಅವೇಶ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಮಧ್ಯಪ್ರದೇಶ ದೇಶೀಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ಅವೇಶ್ ಖಾನ್ 39 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 68 ಇನ್ನಿಂಗ್ಸ್​ಗಳಲ್ಲಿ 22.27 ಸರಾಸರಿಯಲ್ಲಿ 154 ವಿಕೆಟ್​ ಪಡೆದಿದ್ದಾರೆ. ಅವರು ಪ್ರಥಮ ದರ್ಜೆ ಪಂದ್ಯದಲ್ಲಿ ಎರಡು ಬಾರಿ 10ಕ್ಕೂ ಹೆಚ್ಚು ವಿಕೆಟ್​​ಗಳನ್ನು ಪಡೆದಿದ್ದಾರೆ. ಇದು ಕೆಂಪು ಚೆಂಡಿನೊಂದಿಗೆ ಅವರ ಪರಾಕ್ರಮವನ್ನು ಸಾಬೀತುಪಡಿಸುತ್ತದೆ. ಬಲಗೈ ವೇಗಿ ಇನ್ನೂ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿಲ್ಲ. ಆದಾಗ್ಯೂ ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ತಂಡಕ್ಕೆ ಭವಿಷ್ಯದ ಆಟಗಾರ ಎನಿಸಿಕೊಳ್ಳಬಹುದು.

ಇದನ್ನೂ ಓದಿ : Virat Kohli : ವಿರಾಟ್​ ಕೊಹ್ಲಿಗೆ ಐಸಿಸಿಯಿಂದ ಸಿಕ್ಕಿತು ಮತ್ತೊಂದು ಗೌರವ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ಗಳಲ್ಲಿ 246 ರನ್​ಗಳಿಗೆ ಆಲೌಟ್ ಆಗಿದ್ದು, ಸ್ಪಿನ್ನರ್​ಗಳು 10 ವಿಕೆಟ್​ಗಳಲ್ಲಿ 8 ವಿಕೆಟ್​ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬೌಲಿಂಗ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 505 ವಿಕೆಟ್​​ ಪಡೆದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿಯನ್ನು ಹಿಂದಿಕ್ಕಿ 54 ಟೆಸ್ಟ್ ಪಂದ್ಯಗಳಲ್ಲಿ 501 ವಿಕೆಟ್​ಗಳನ್ನು ಪಡೆದಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಇಬ್ಬರೂ ಮೊದಲ ಇನ್ನಿಂಗ್ಸ್​ಗಳಲ್ಲಿ ತಲಾ ಮೂರು ವಿಕೆಟ್​ಗಳನ್ನು ಹಂಚಿಕೊಂಡರು.

ಅವೇಶ್ ಖಾನ್​​ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗದಿರಬಹುದು ಆದರೆ ದೇಶೀಯ ಟೂರ್ನಿಯಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಲು ಅವರಿಗೆ ಅವಕಾಶವಿದೆ. ಅವರು ಅಲ್ಲಿ ಪ್ರದರ್ಶನ ನೀಡಿದರೆ ಅವರು ಟೆಸ್ಟ್ ಕ್ಯಾಪ್​ ಪಡೆಯಲು ಸಾಧ್ಯ. ಏತನ್ಮಧ್ಯೆ, ಯಶಸ್ವಿ ಜೈಸ್ವಾಲ್ ಭಾರತದ ಇನ್ನಿಂಗ್ಸ್​ಗೆ ಉತ್ತಮ ಆರಂಭವನ್ನು ನೀಡಿದ್ದಾರೆ.

Exit mobile version