ಪೋರ್ಟ್ ಆಫ್ ಸ್ಪೇನ್ : ಆಲ್‌ರೌಂಡರ್ ಅಕ್ಷರ್ ಪಟೇಲ್ IND vs WI ODI ಸರಣಿಯ ಎರಡನೇ ಪಂದ್ಯದ ಹೀರೊ. ಅವರು ಕೊನೇ ಕ್ಷಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸದೇ ಹೋಗಿದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಳ್ಳುವ ಅವಕಾಶ ಪ್ರವಾಸಿ ಶಿಖರ್ ಧವನ್ ಬಳಗಕ್ಕೆ ತಪ್ಪಿ ಹೋಗುತ್ತಿತ್ತು. ಅಂತೆಯೇ ಕೊನೇ ೧೦ ಓವರ್‌ಗಳಲ್ಲಿ ೧೦೦ ರನ್ ಬಾರಿಸಿ ರನ್ ಚೇಸ್ ಮಾಡಿ ಗೆದ್ದು ದಾಖಲೆಯೊಂದನ್ನು ಮಾಡುವ ಅವಕಾಶವನ್ನೂ ಕಳೆದುಕೊಳ್ಳುತ್ತಿತ್ತು. ಆದರೆ, ಗುಜರಾತ್‌ನ ೨೭ ವರ್ಷದ ಆಟಗಾರ ಎದುರಾಳಿಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದರು.
೩೫ ಎಸೆತಗಳಲ್ಲಿ ೬೪ ರನ್ ಬಾರಿಸಿರುವ ಅಕ್ಷರ್ ಪಟೇಲ್ ಅದಕ್ಕಾಗಿ ೩ ಫೋರ್ ಹಾಗೂ ೫ ಸಿಕ್ಸರ್ ಬಾರಿಸಿದ್ದಾರೆ. ಐದು ಸಿಕ್ಸರ್ ಬಾರಿಸುವ ಮೂಲಕ ಅವರು ಟೀಮ್ ಭಾರತ ತಂಡದ ಮಾಜಿ ನಾಯಕ ಹಾಗೂ ಯಶಸ್ವಿ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ. ಅಂದ ಹಾಗೆ ಈ ದಾಖಲೆ ಸೃಷ್ಟಿಯಾಗಿರುವುದು ೧೭ ವರ್ಷಗಳ ಹಿಂದೆ.
ಮಹೇಂದ್ರ ಸಿಂಗ್ ಧೋನಿ ೨೦೦೫ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದು ಚೇಸಿಂಗ್ ವೇಳೆ ೩ ಸಿಕ್ಸರ್ ಬಾರಿಸಿದ್ದರು. ಈ ಮೂಲಕ ಏಳು ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದು ಗರಿಷ್ಠ ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಅಲ್ಲದೆ, ಆ ಪಂದ್ಯದಲ್ಲೂ ಧೋನಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದ್ದರು. ಆ ದಾಖಲೆಯನ್ನು ಇದೀಗ ಅಕ್ಷರ್, ಐದು ಸಿಕ್ಸರ್ ಹಾಗೂ ಗೆಲುವಿನ ಸಿಕ್ಸರ್ ಮೂಲಕ ಮುರಿದಿದ್ದಾರೆ.
ಅಂದ ಹಾಗೆ ಭಾರತ ತಂಡ ಮಾಜಿ ಬ್ಯಾಟರ್ ಯೂಸುಫ್ ಪಟೇಲ್ ೨೦೧೧ರಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ೭ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ೩ ಸಿಕ್ಸರ್ ಬಾರಿಸುವ ಮೂಲಕ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದರು.
ಇದನ್ನೂ ಓದಿ | India vs West Indies 2nd ODI| ಅಕ್ಷರ್ ಪಟೇಲ್ ಅಬ್ಬರ, ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ