ವಡೋದರಾ : ಭಾರತ ತಂಡದ ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ (Axar Patel ) ತಮ್ಮ ಬಹುಕಾಲದ ಗೆಳತೆ ಮೇಹಾ ಪಟೇಲ್ (Meha patel) ಅವರನ್ನು ಗುರುವಾರ (ಜನವರಿ 26ರಂದು) ವಿವಾಹವಾದರು. ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿ ಹಸೆಮಣೆಗೆ ಕಾಲಿಟ್ಟಿತು. ಈ ಮೂಲಕ ಎರಡು ದಿನಗಳಲ್ಲಿ ಇಬ್ಬರು ಕ್ರಿಕೆಟಿಗರು ವೈವಾಹಿಕ ಜೀವನಕ್ಕೆ ಕಾಲಿಟ್ಟಂತಾಯಿತು. ಜನವರಿ 25ರಂದು ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಕೆ. ಎಲ್ ರಾಹುಲ್ ಅವರು ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿ ಅತಿಯಾ ಶೆಟ್ಟಿಯನ್ನು ಮದುವೆಯಾಗಿದ್ದರು.
ಆಲ್ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ಟೀಮ್ ಇಂಡಿಯಾದ ಆಲ್ರೌಂಡರ್ ಹೊಣೆಗಾರಿಕೆಯನ್ನು ಹೆಗಲೇರಿಸಿಕೊಂಡಿದ್ದರು. ಶ್ರೀಲಂಕಾ ವಿರುದ್ಧದ ಹಾಗೂ ಬಾಂಗ್ಲಾದೇಶ ಪ್ರವಾಸದಲ್ಲಿ ಅವರು ಸ್ಮರಣೀಯ ಪ್ರದರ್ಶನ ನೀಡಿದ್ದರು. ಆದರೆ, ಮದುವೆ ಹಿನ್ನೆಲೆ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ರಜೆ ಪಡೆದುಕೊಂಡಿದ್ದರು.
ಇದನ್ನೂ ಓದಿ : Akshar Patel | ಜನುಮ ದಿನದ ಸಂಭ್ರಮದಲ್ಲಿ ಭಾರತ ತಂಡದ ಆಲ್ರೌಂಡರ್ ಅಕ್ಷರ್ ಪಟೇಲ್
ಅಕ್ಷರ್ ಪಟೇಲ್ ಹಾಗೂ ಮೇಹಾ ಪಟೇಲ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಡಯೆಟಿಷಿಯನ್ ಆಗಿರುವ ಮೇಹಾ ಅವರು ಪ್ರಾಣಿ ಪ್ರಿಯೆಯೂ ಹೌದು. ಅವರಿಬ್ಬರ ಡೇಟಿಂಗ್ ಫೋಟಗಳು ಮೇಹಾ ಅವರ ಇನ್ಸ್ಟಾಗ್ರಾಮ್ನಲ್ಲಿವೆ.