ಬೆಂಗಳೂರು: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಬುಧವಾರ ರಾಜ್ಕೋಟ್ನಲ್ಲಿ(Rajkot) ನಡೆಯಲಿದೆ. ಮೊದಲೆರಡು ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ ಸೇರಿ ಕೆಲ ಆಟಗಾರರು ಈಗಾಗಲೇ ತಂಡ ಸೇರಿಕೊಂಡಿದ್ದಾರೆ. ಆದರೆ ಏಷ್ಯಾಕಪ್ ವೇಳೆ ಗಾಯಗೊಂಡ ಅಕ್ಷರ್ ಪಟೇಲ್(Axar Patel) ಈ ಪಂದ್ಯದಿಂದ ಹೊರಬಿದ್ದಿರುವುದಾಗಿ ಕ್ರಿಕ್ಬಜ್ ವರದಿ ಮಾಡಿದೆ.
ಕ್ರಿಕ್ಬಜ್ ವರದಿಯ ಪ್ರಕಾರ ಅಕ್ಷರ್ ಪಟೇಲ್ ಅವರು ಮೊಣಕೈ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಆಸೀಸ್ ವಿರುದ್ಧದ ಅಂತಿಮ ಪಂದ್ಯದಿಂದ ಹೊರಬಿದ್ದಿದ್ದು ಸದ್ಯ ಅವರು ಬೆಂಗಳೂರಿನಲ್ಲಿರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದೆ. ಅಕ್ಷರ್ ಅವರು ಫಿಟ್ನೆಸ್ ಪಾಸ್ ಆದ ಬಳಿಕ ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಏಷ್ಯಾಕಪ್ ವೇಳೆ ಗಾಯ
ಏಷ್ಯಾಕಪ್ನ ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಗಾಯದ ಮಧ್ಯೆಯೂ ಅವರು ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಮೊಣಕೈ ಮತ್ತು ಸ್ನಾಯು ಸೆಳೆತದ ಗಾಯದಿಂದ ಬಳಲಿದ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. ಒಂದೊಮ್ಮೆ ಅಕ್ಷರ್ ಪಟೇಲ್ ಅವರು ಗಾಯದಿಂದ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೆ, ಆಗ ಅವರ ಸ್ಥಾನಕ್ಕೆ ಅಶ್ವಿನ್ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅಶ್ವಿನ್ಗೆ ಆಸೀಸ್ ಸರಣಿಯಲ್ಲಿ ದಿಢೀರ್ ಅವಕಾಶ ನೀಡಿದಂತೆ ತೋರುತ್ತಿದೆ. ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ಕೂಡ ಈ ರೇಸ್ನಲ್ಲಿದ್ದಾರೆ.
ಗಿಲ್-ಶಾರ್ದೂಲ್ಗೆ ವಿಶ್ರಾಂತಿ
ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್(Shubman Gill) ಮತ್ತು ಆಲ್ರೌಂಡರ್ ಶಾರ್ದೂಲ್ ಠಾಕೂರ್(Shardul Thakur) ಅವರಿಗೆ, ಆಸೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ(IND vs AUS) ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿರುವ ಕಾರಣ ಬುಧವಾರ ನಡೆಯುವ ಪಂದ್ಯ ಅಷ್ಟಾಗಿ ಮಹತ್ವ ಪಡೆದಿಲ್ಲ. ವಿಶ್ವಕಪ್ಗೆ(ODI world cup) ಇನ್ನೊಂದು ವಾರ ಇರುವ ಕಾರಣ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ World Record: ಸಿಕ್ಸರ್ಗಳ ಮೂಲಕವೇ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ವಿಶ್ವಕಪ್ ಟೂರ್ನಿಯ ಹಿನ್ನಲೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ತಂಡದ ಖಾಯಂ ನಾಯಕ ರೋಹಿತ್ ಶರ್ಮ ಮತ್ತು ಅನುಭವಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಗಾಯಕ್ವಾಡ್, ಸೂರ್ಯಕುಮಾರ್, ಆರ್ ಅಶ್ವಿನ್ ಅಂತಿಮ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಭಾರತ ವಿಶ್ವಕಪ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್.