ಕರಾಚಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅವರು ತನ್ನ ಆದರ್ಶ ಕ್ರಿಕೆಟಿಗ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ(Babar Azam) ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಮಾತನಾಡಿದ ಬಾಬರ್ “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಆದರ್ಶ ಕ್ರಿಕೆಟಿಗ ಎಂದರೆ ಎಬಿಡಿ ವಿಲಿಯರ್ಸ್. ವಿಶೇಷವಾಗಿ ಅವರು ಆಡುವ ಶೈಲಿ ಬಹಳ ಇಷ್ಟ. ಅವರ ಆಟವನ್ನು ನೋಡಿದ ಬಳಿಕ ಅದೆಷ್ಟೋ ಸಲ ನಾನು ನೆಟ್ಸ್‌ನಲ್ಲಿ ಅವರಂತೆ ಬ್ಯಾಟ್ ಮಾಡಲು ಪ್ರಯತ್ನಿಸಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ” ಎಂದು ಬಾಬರ್ ಹೇಳಿದ್ದಾರೆ.
ಹಲವು ಟಿ20 ಕ್ರಿಕೆಟ್ ಲೀಗ್ ಆಡಿದ್ದರೂ ಎಬಿಡಿ ಅವರ ಜತೆ ಆಡಲು ಅವಕಾಶ ಸಿಗದೇ ಇರುವ ಬಗ್ಗೆ ಬೇಸರವಿದೆ. ಆದರೆ ಅವರ ಆಟವನ್ನು ನೋಡುವು ಮತ್ತು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನಗೆ ಖಷಿ ಇದೆ ಎಂದು ಬಾಬರ್ ತಿಳಿಸಿದರು.
ವಿಶ್ವ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿರುವ ಬಾಬರ್ ಅಜಂ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಂಕಾಗಿದ್ದಾರೆ. ಅದರಲ್ಲೂ ಕಳೆದ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಂ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದ್ದರು. ಸದ್ಯ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯನ್ನು ಗೆಲ್ಲುವ ಕಡೆ ಬಾಬರ್ ಚಿತ್ತ ನೆಟ್ಟಿದ್ದಾರೆ.