Site icon Vistara News

Babar Azam: ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ದಾಖಲೆ ಬರೆದ ಬಾಬರ್​ ಅಜಂ

Babar Azam

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಇತಿಹಾಸದಲ್ಲಿ 3000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಬಾಬರ್​ ಅಜಂ(Babar Azam) ಪಾತ್ರರಾಗಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟಿಯರ್ಸ್(Quetta Gladiatiors) ವಿರುದ್ಧದ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಪರ ಆಡಲಿಳಿದ ಬಾಬರ್​ ಬಿರುಸಿನ ಬ್ಯಾಟಿಂಗ್​ ನಡೆಸಿ 68 ರನ್​ ಬಾರಿಸುವ ಮೂಲಕ ಈ ಸಾಧನೆ ಮಾಡಿದರು.

ಬಾಬರ್​ಗೆ 3 ಸಾವಿರ ರನ್​ ಪೂರ್ತಿಗೊಳಿಸಲು 65 ರನ್‌ಗಳ ಅಗತ್ಯವಿತ್ತು 68 ರನ್​ ಬಾರಿಸುವ ಮೂಲಕ ಅವರು ಈ ಗುರಿಯನ್ನು ತಲುಪಿದರು. ಫಖಾರ್​ ಜಮಾನ್, ಶೋಯೆಬ್ ಮಲಿಕ್ ಮತ್ತು ಮೊಹಮ್ಮದ್ ರಿಜ್ವಾನ್ ಪಿಎಸ್‌ಎಲ್‌ನಲ್ಲಿ 2 ಸಾವಿರಕ್ಕೂ ಅಧಿಕ ರನ್​ ಗಳಿಸಿದ ಆಟಗಾರರಾಗಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಇದುವರೆಗೆ 78 ಇನಿಂಗ್ಸ್​ ಆಡಿರುವ ಬಾಬರ್ ಅಜಂ 3003 ರನ್​ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 29 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪಂದ್ಯ ಸೋತ ಬಾಬರ್​ ಪಡೆ

ಬಾಬರ್ ಅಜಂ ಅವರ ಅರ್ಧಶತಕದ ಹೊರತಾಗಿಯೂ ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಸೋಲಿಗೆ ತುತ್ತಾಯಿತು. ಮೊದಲು ಬ್ಯಾಟಿಂಗ್​ ನಡೆಸಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ 206 ರನ್ ಬಾರಿಸಿ ಕಠಿಣ ಗುರಿ ನೀಡಿತು. ಇದನ್ನು ಬೆನ್ನತ್ತಿದ ಪೇಶಾವರ್ ಝಲ್ಮಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್​ ಕಲೆಹಾಕಿತು. ಈ ಮೂಲಕ 16 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ Mohammad Hafeez: ಪಾಕ್​ ಕ್ರಿಕೆಟ್​ ಮಂಡಳಿಯಲ್ಲೂ ಅರಾಜಕತೆ; ನಿರ್ದೇಶಕ ಸ್ಥಾನದಿಂದ ಹಫೀಜ್​ ಕಿಕ್​ ಔಟ್​

ಪಾಕ್​ ತಂಡಕ್ಕೆ ಮತ್ತೆ ನಾಯಕನಾಗಲಿದ್ದಾರಾ ಬಾಬರ್ ಅಜಂ?


ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರನ್ನು ತಮ್ಮ ಹೊಸ ಅಧ್ಯಕ್ಷರನ್ನಾಗಿ ಘೋಷಿಸಿದ ಬೆನ್ನಲ್ಲೇ, ಬಾಬರ್ ಅಜಂ(Babar Azam) ಅವರನ್ನು ಮತ್ತೆ ತಂಡದ ನಾಯಕರನ್ನಾಗಿ ಮರು ನೇಮಕ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಭಾರತದ ಆತಿಥ್ಯದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಬಾಬರ್​ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು.

ಶಾಹೀನ್ ಅಫ್ರಿದಿ(Shaheen Afridi) ಮತ್ತು ಶಾನ್ ಮಸೂದ್(Shan Masood) ಅವರ ನಾಯಕತ್ವದಲ್ಲಿ ಪಾಕಿಸ್ತಾನ ಆಡಿದ ಎಲ್ಲ ಸರಣಿಯಲ್ಲೂ ಹೀನಾಯವಾಗಿ ಸೋಲು ಕಾಣುತ್ತಿದೆ. ಇದೇ ಕಾರಣಕ್ಕೆ ಪಿಸಿಬಿ ನೂತನ ಅಧ್ಯಕ್ಷ ನಖ್ವಿ ಅವರು ಮತ್ತೆ ಬಾಬರ್​ಗೆ ನಾಯಕ್ವ ನೀಡಲಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿದೆ. ಇನ್ನೊಂದು ಮೂಲಗಳ ಪ್ರಕಾರ ಬಾಬರ್​ ನಾಯಕತ್ವ ವಹಿಸಿಕೊಳ್ಳುವ ಆಸಕ್ತಿ ತೋರುತ್ತಿಲ್ಲ ಎಂದು ವರದಿಯಾಗಿದೆ.

Exit mobile version