ನವದೆಹಲಿ: ಸದಾ ಭಾರತೀಯ ಆಟಗಾರರ ಮೇಲೆ ಕಿಡಿ ಕಾರಿ ದೇಶ ಪ್ರೇಮದ ಪಾಠ ಮಾಡುವ ಗೌತಮ್ ಗಂಭೀರ್(Gautam Gambhir), ಪಾಕ್ಕಿಸ್ತಾನ ಆಟಗಾರ ಬಾಬರ್ ಅಜಂ(Babar Azam) ಅವರ ಕ್ರಿಕೆಟ್ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಕಂಡ ಅತ್ಯುತ್ತಮ ಬ್ಯಾಟರ್ ಆಗುವ ಎಲ್ಲ ಸಾಮರ್ಥ್ಯ ಬಾಬರ್ಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಬರ್ ಕಮ್ಬ್ಯಾಕ್ ಗ್ಯಾರಂಟಿ
ಬಾಬರ್ ಅಜಂ ಅವರು ನಾಯಕತ್ವ ವಹಿಸಿಕೊಳ್ಳುವ ಮುನ್ನ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದರು. ನಾಯಕತ್ವ ನೀಡಿದ ಬಳಿಕ ಅವರ ಮೇಲೆ ಹೆಚ್ಚಿನ ಒತ್ತಡವನ್ನು ಪಾಕ್ ಕ್ರಿಕೆಟ್ ಮಂಡಳಿ ಹಾಕಿದ ಪರಿಣಾಮ ಅವರಿಗೆ ಬ್ಯಾಟಿಂಗ್ ಕಡೆ ಗಮನ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ ಚಿಂತೆ ಮುಕ್ತರಾಗಿದ್ದಾರೆ. ಇನ್ನು ಅವರ ಅಸಲಿ ಆಟ ಪ್ರಾರಂಭವಾಗುತ್ತದೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಅವರ ಹೆಸರೇ ರಾರಾಜಿಸಲಿದೆ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ Gautam Gambhir : ಮೋದಿಯನ್ನು ಪನೌತಿ ಎಂದವರಿಗೆ ತಿರುಗೇಟು ಕೊಟ್ಟ ಗೌತಮ್ ಗಂಭೀರ್
ಸ್ಪೋರ್ಟ್ಸ್‌ಕೀಡಾ ಶೋನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಾಸಿಮ್ ಅಕ್ರಮ್ ಜತೆ ಮಾತನಾಡುವ ವೇಳೆ ಗಂಭೀರ್ ಈ ವಿಚಾರವನ್ನು ಹೇಳಿದ್ದಾರೆ. “29 ವರ್ಷದ ಬಾಬರ್ ಇನ್ನು ಮೂರು ಮಾದರಿಯ ಕ್ರಿಕೆಟ್ನಲ್ಲಿ ಸುನಾಮಿ ಸೃಷ್ಟಿಸಲಿದ್ದಾರೆ. ಜತೆಗೆ ಅನೇಕ ಆಟಗಾರರ ದಾಖಲೆಯನ್ನು ಮುರಿಯಲಿದ್ದಾರೆ. ಬಾಬರ್ ನೈಜ ಸಾಮರ್ಥ್ಯ ಇನ್ನು ಮುಂದೆ ತಿಳಿಯಲಿದೆ. ಆತ ಪಾಕಿಸ್ತಾನ ಕ್ರಿಕೆಟ್ ಇದುವರೆಗೆ ಕಾಣದಂತಹ ಬ್ಯಾಟರ್ ಆಗಿ ಇತಿಹಾಸದ ಪುಟ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್ ಲೋಕವನ್ನು ಆಳಲಿದ್ದಾರೆ” ಎಂದು ಹೇಳಿದರು.
ದೇಶ ವಿರೋಧಿ
ಏಷ್ಯಾ ಕಪ್ನಲ್ಲಿ ವಿರಾಟ್ ಕೊಹ್ಲಿ ಸೇರಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ ವಿಚಾರವಾಗಿ ಗಂಭೀರ್ ಕಿಡಿ ಕಾರಿದ್ದರು. ಬದ್ಧ ಎದುರಾಳಿ ಪಾಕ್ ಆಟಗಾರರಲ್ಲಿ ಮಾತನಾಡುವುದು ಸರಿಯಲ್ಲ. ಇದೇನಿದ್ದರು ಮೈದಾನದ ಹೊರಗಡೆ ಇರಲಿ ಎಂದು ದೇಶ ಪ್ರೇಮದ ಪಾಠ ಮಾಡಿದ್ದ ಗಂಭೀರ್ ತಾನು ಮಾತ್ರ ಪಾಕ್ ಆಟಗಾರರನ್ನು ಒಲೈಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದು ಗಂಭೀರ್ ಅವರನ್ನು ದೇಶ ವಿರೋಧಿ ಎಂದಿದ್ದಾರೆ.
2007ರ ಟಿ20 ವಿಶ್ವಕಪ್ ಫೈನಲ್ ಮತ್ತು 2011 ಏಕದಿನ ವಿಶ್ವಕಪ್ ಫೈನಲ್ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಶ್ರೀಶಾಂತ್ ಜತೆ ಕಿರಿಕ್
ಕೆಲ ದಿನಗಳ ಹಿಂದಷ್ಟೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಮೈದಾನದಲ್ಲೇ ಗಂಭೀರ್ ಅವರು ಎಸ್.ಶ್ರೀಶಾಂತ್(S. Sreesanth) ಜತೆ ಕಿರಿಕ್ ಮಾಡಿಕೊಂಡಿದ್ದರು. ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಪದೇಪದೆ ಹೇಳುವ ಮೂಲಕ ಹೀಯಾಳಿಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.