ಕೋಲ್ಕೋತಾ: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(Babar Azam) ಅವರು ವಿಶ್ವಕಪ್ ಮುಗಿದ ತಕ್ಷಣ ಹಸೆ ಮಣೆ ಏರಲು ಸಿದ್ಧರಾಗಿರುವಂತೆ ತೋರುತ್ತಿದೆ. ಹೌದು ಬಾಬರ್ ಅವರು ಕೋಲ್ಕತ್ತಾದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯದ ಬಳಿಕ ಇಲ್ಲಿನ ಪ್ರಸಿದ್ಧ ಬಟ್ಟೆ ಅಂಗಡಿಯಿಂದ 7 ಲಕ್ಷ ನೀಡಿ ಶೇರ್ವಾನಿಯನ್ನು(Sherwani) ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಬಾಬರ್ ಅಜಂ ಅವರ ವಿವಾಹವು ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಬಾಬರ್ ಅವರು ವಧು ಮತ್ತು ವರನ ಉಡುಗೆಗೆ ಹೆಸರುವಾಸಿಯಾದ ಕೋಲ್ಕೊತಾ ಸಬ್ಯಸಾಚಿಯಿಂದ 7 ಲಕ್ಷ ಬೆಲೆ ಬಾಳುವ ಶೇರ್ವಾನಿಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಶೇರ್ವಾನಿ ಜತೆಗೆ ಆಭರಣವನ್ನು ಕೂಡ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅಜಂ ಸಂಬಂಧಿಕರು ಕೂಡ ಈ ವ್ಯವಸ್ಥೆಯಲ್ಲಿ ನಿರತರಾಗಿದ್ದಾರೆ. ವಿಶ್ವಕಪ್ನಂತಹ ಪಂದ್ಯಗಳ ಮಧ್ಯೆ ಬಾಬರ್ ಅವರು ಮದುವೆಯ ಶಾಪಿಂಗ್ ನಡೆಸಿದ್ದು ಪಾಕಿಸ್ತಾನದಲ್ಲಿ ಚರ್ಚಿತ ವಿಷಯವಾಗಿದೆ. ಆದರೆ ಬಾಬರ್ ಅವರು ತಮ್ಮ ಮದುವೆಯಾಗಲಿ ಹಾಗೂ ಅವರು ಶೇರ್ವಾನಿ ಖರೀದಿಸಿದ್ದನ್ನು ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ.
ಇದನ್ನೂ ಓದಿ ಮಳೆ ಭೀತಿಯ ಮಧ್ಯೆ ಪಾಕ್-ಕಿವೀಸ್ ಅದೃಷ್ಟ ಪರೀಕ್ಷೆ; ಇತ್ತಂಡಗಳಿಗೂ ಗೆಲುವು ಅತ್ಯಗತ್ಯ
ವಿಶ್ವಕಪ್ ಬಳಿಕ ನಾಯಕತ್ವ ಬದಲಾವಣೆ?
ಹಾಲಿ ಆವೃತ್ತಿಯ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ತೋರುತ್ತಿರುವ ಕಾರಣ ವಿಶ್ವಕಪ್ ಬಳಿಕ ಬಾಬರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ ಎಂಬ ಕೂಗು ಈಗಾಗಲೇ ಕೇಳಿ ಬಂದಿದೆ. ಒಂದೊಮ್ಮೆ ಪಾಕಿಸ್ತಾನ ತಂಡ ಶನಿವಾರ ನಡೆಯುವ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸೋತರೆ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದೆ. ಹೀಗಾದರೆ ಬಾಬರ್ ನಾಯಕತ್ವ ಕಳೆದುಕೊಳ್ಳುವುದು ಖಚಿತ ಎನ್ನುವುತ್ತಿವೆ ಮೂಲಗಳು.
ಮೂಲಗಳ ಪ್ರಕಾರ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ವೇಳೆ ಬಾಬರ್ ತಲೆದಂಡ ಖಚಿತ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. 2024 ರ ಟಿ20 ವಿಶ್ವಕಪ್ ಮತ್ತು 2025 ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಪಿಬಿಸಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ತನ್ನ ವರದಿಯಲ್ಲಿ ತಿಳಿಸಿತ್ತು.
ಇದನ್ನೂ ಓದಿ World Cup Points Table: ಆಫ್ಘನ್ಗೆ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಪಾಕಿಸ್ತಾನ
ರೇಸ್ನಲ್ಲಿ ರಿಜ್ವಾನ್, ಅಫ್ರಿದಿ
ಬಾಬರ್ ಅವರು ನಾಯಕತ್ವದಿಂದ ಕೆಳಗಿಳಿದರೆ ಅವರ ಸ್ಥಾನಕ್ಕೆ ಇಬ್ಬರು ಆಟಗಾರರು ರೇಸ್ನಲ್ಲಿದ್ದಾರೆ. ಅವರೆಂದರೆ ಮೊಹಮ್ಮದ್ ರಿಜ್ವಾನ್ ಮತ್ತು ವೇಗಿ ಶಾಹೀನ್ ಅಫ್ರಿದಿ. ರಿಜ್ವಾನ್ ಪ್ರತಿ ಪಂದ್ಯದಲ್ಲೂ ಉತ್ತಮ ಇನಿಂಗ್ಸ್ ಕಟ್ಟಿ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಹೀಗಾಗಿ ಅವರು ಕೂಡ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾಹೀನ್ ಅಫ್ರಿದಿ ಈ ಹಿಂದೆಯೇ ಬಾಬರ್ ನಾಯಕತ್ವದ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ್ದರು. ಡ್ರೆಸಿಂಗ್ ರೂಮ್ನಲ್ಲಿ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬಾಬರ್ ಅವರು ಆಟಗಾರರ ಜತೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಹೇಳಿದ್ದರು. ಒಟ್ಟಾರೆ ಬಾಬರ್ಗೆ ಈ ವಿಶ್ವಕಪ್ ಟೂರ್ನಿ ಅಗ್ನಿಪರೀಕ್ಷೆಯಾಗಿದೆ.