ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಕ್ರಿಕೆಟ್ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯಕ್ಕೆ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೆ (Shubman Gill) ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಶುಬ್ಮನ್ ಗಿಲ್ 74 ಮತ್ತು 104 ರನ್ ಗಳಿಸಿದ್ದಾರೆ. ಮೂರು ಏಕದಿನ ಪಂದ್ಯಗಳಿಗೆ ಮೊದಲು, ಬಲಗೈ ಬ್ಯಾಟರ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಜಮ್ ಅವರನ್ನು ಹಿಂದಿಕ್ಕಲು ಸುವರ್ಣಾವಕಾಶವಿತ್ತು. ರಾಜ್ಕೋಟ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಳೆದ ಎರಡು ಹಣಾಹಣಿಗಳಲ್ಲಿ ಶತಕ ಹಾಗೂ ಅರ್ಧಶತಕಗಳನ್ನು ಗಳಿಸಿರುವ ಗಿಲ್ಗೆ ಖಂಡಿತವಾಗಿಯೂ ಮತ್ತೊಂದು ದೊಡ್ಡ ಸ್ಕೋರ್ ಗಳಿಸುವ ಅವಕಾಶವಿತ್ತು. ಆದಾಗ್ಯೂ, ಮೂರನೇ ಏಕದಿನ ಪಂದ್ಯಕ್ಕೆ ಯುವ ಆಟಗಾರನಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅಜಮ್ ದಾಖಲೆ ಮುರಿಯುವ ಅವಕಾಶ ತಪ್ಪಿದೆ.
ಅದ್ಭುತ ಫಾರ್ಮ್ನಲ್ಲಿರುವ ಗಿಲ್
ಕಳೆದ ಬುಧವಾರ ಐಸಿಸಿ ಶ್ರೇಯಾಂಕ ಅಪ್ಡೇಟ್ ಆದ ನಂತರ ಭಾರತದ ಆರಂಭಿಕ ಆಟಗಾರ ಪ್ರಸ್ತುತ ಏಕದಿನ ಬ್ಯಾಟರ್ಗಳ ಐಸಿಸಿ ಶ್ರೇಯಾಂಕದಲ್ಲಿ 814 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಾಕ್ ನಾಯಕ ಬಾಬರ್ ಅಜಮ್ ಅವರಿಗಿಂತ ಕೇವಲ 43 ರೇಟಿಂಗ್ ಪಾಯಿಂಟ್ಗಳಿಂದ (857 ರೇಟಿಂಗ್ ಪಾಯಿಂಟ್ಗಳು) ಹಿಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಿಲ್ 63 ಎಸೆತಗಳಲ್ಲಿ 74 ರನ್ ಗಳಿಸಿದ್ದರು ಮತ್ತು ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 97 ಎಸೆತಗಳಲ್ಲಿ 104 ರನ್ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದ್ದ ಗಿಲ್ ಏಷ್ಯಾ ಕಪ್ 2023 ರ ಸಮಯದಲ್ಲಿ ಸಂಪೂರ್ಣವಾಗಿ ಫಾರ್ಮ್ಗೆ ಮರಳಿದ್ದರು. ಅಲ್ಲಿ ಅವರು ಪ್ರಮುಖ ಗರಿಷ್ಠ ಸ್ಕೋರರ್ ಆಗಿ ಆಟ ಮುಗಿಸಿದ್ದರು. ಅವರು ಆಸೀಸ್ ವಿರುದ್ಧವೂ ತಮ್ಮ ಫಾರ್ಮ್ ಉಳಿಸಿಕೊಂಡರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದಿನ ದೊಡ್ಡ ಸ್ಟಾರ್ ಎಂಬ ಹೆಗ್ಗಳಿಕೆಗೆ ತಕ್ಕ ಹಾಗೆ ಬ್ಯಾಟ್ ಬೀಸಿದರು. ಇದೇ ವೇಳೆ ಏಕದಿನ ಮಾದರಿಯಲ್ಲಿ ನಂ.1 ಬ್ಯಾಟರ್ ಎಂಬ ಟ್ಯಾಗ್ ಪಡೆಯುವ ಅವಕಾಶವೂ ಗಿಲ್ಗೆ ಸಿಕ್ಕಿತ್ತು. ಆದಾಗ್ಯೂ, ಅವರು ಸ್ಥಾನವನ್ನು ಪಡೆಯಲು ವಿಶ್ವಕಪ್ ವರೆಗೆ ಕಾಯಬೇಕಾಗಿದೆ ಎಂದು ತೋರುತ್ತದೆ.
ಇದನ್ನೂ ಓದಿ : Shubman Gill: ಗಿಲ್ ಶತಕಕ್ಕೆ ಸಚಿನ್ ಸೇರಿ ಹಲವು ದಿಗ್ಗಜರ ದಾಖಲೆ ಪತನ
ಬಾಬರ್ ಅಜಮ್ ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು. ಸ್ಪರ್ಧೆಯಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಪಾಕಿಸ್ತಾನದ ನಾಯಕ ಮುಂಬರುವ ವಿಶ್ವಕಪ್ ನಲ್ಲಿ ಮತ್ತೆಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅದ್ಭುತ ರನ್ ಗಳಿಸುವ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದಾರೆ. ಮೆನ್ ಇನ್ ಗ್ರೀನ್ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ಅವಕಾಶದಲ್ಲಿ ಬಾಬರ್ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಸಿಕೊಳ್ಳುವ ಭರವಸೆ ಕೂಡ ಹೊಂದಿದ್ದಾರೆ.