ಲಾಹೋರ್: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(Babar Azam) ಅವರು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ(Virat Kohli) ವಿಶ್ವ ದಾಖಲೆಯೊಂದನ್ನು ಮುರಿಸಿದ್ದಾರೆ. ಬುಧವಾರ ನಡೆದ ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ನ ಸೂಪರ್-4(Asia Cup Super 4) ಪಂದ್ಯದಲ್ಲಿ ಬಾಬರ್ ಅವರು ಕೊಹ್ಲಿಯ ದಾಖಲೆಯನ್ನು ಮುರಿದರು.
ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಾಯಕ ಶಕಿಬ್ ಅಲ್ ಹಸನ್ ಮತ್ತ ಮುಶ್ಫಿಕರ್ ರಹೀಂ ಅವರ ಅರ್ಧಶತಕದ ನೆರವಿನಿಂದ 193ರನ್ಗೆ ಆಲೌಟ್ ಆಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಇಮಾಮ್ ಉಲ್ ಹಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಭರ್ಜರಿ ಆಟದಿಂದಾಗಿ 39.3 ಓವರ್‌ಗಳಲ್ಲಿ 3 ವಿಕೆಟಿಗೆ 194 ರನ್ ಪೇರಿಸಿ ಜಯಭೇರಿ ಬಾರಿಸಿತು.
ವಿಶ್ವ ದಾಖಲೆ ಪತನ
ಚೇಸಿಂಗ್ ವೇಳೆ ಬಾಬರ್ ಅಜಂ 17 ರನ್ ಗಳಿಸಿದ ವೇಳೆ ವಿರಾಟ್ ಕೊಹ್ಲಿ(Babar vs Kohli) ಅವರ ವಿಶ್ವ ದಾಖಲೆಯನ್ನು ಮುರಿದರು. ಏಕದಿನ ಇತಿಹಾಸದಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆದರು. ಈ ಹಿಂದಿ ಕೊಹ್ಲಿ ಅವರು 36 ಇನ್ನಿಂಗ್ಸ್‌ಗಳಲ್ಲಿ ಈ ವಿಶ್ವದಾಖಲೆ ಬರೆದಿದ್ದರು. ಆದರೆ ಈಗ ಬಾಬರ್ ಕೇವಲ 31 ಇನ್ನಿಂಗ್ಸ್ನಲ್ಲಿ ಈ ಮೈಲುಗಲ್ಲು ತಲುಪಿ ಕೊಹ್ಲಿಯ ದಾಖಲೆಯನ್ನು ಮೀರಿ ನಿಂತರು.
ಇದೇ ಟೂರ್ನಿಯ ನೇಪಾಳ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಬಾಬರ್ ಅವರು ಕೊಹ್ಲಿಯ ದಾಖಲೆಯನ್ನು ಮುರಿದ್ದಿದ್ದರು. ನಾಯಕನಾಗಿ ಏಷ್ಯಾಕಪ್ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ ಸಾಧಕರ ಪಟ್ಟಿಯಲ್ಲಿ ಬಾಬರ್ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದರು. ಧೋನಿ ಅನುಪಸ್ಥಿತಿಯಲ್ಲಿ 2014ರ ಏಷ್ಯಾ ಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೊಹ್ಲಿ, ಬಾಂಗ್ಲಾ ವಿರುದ್ಧ 136 ರನ್ ಬಾರಿಸಿದ್ದರು. ಇದು ಈ ವರೆಗಿನ ದಾಖಲೆಯಲಾಗಿತ್ತು. ಆದರೆ ಬಾಬರ್ ನೇಪಾಳ ವಿರುದ್ಧ 151 ರನ್ ಬಾರಿಸಿದ ವೇಳೆ ಕೊಹ್ಲಿ ದಾಖಲೆ ಮುರಿದ್ದರು.
ಅತ್ಯಧಿಕ ವೈಯಕ್ತಿಕ ರನ್ ದಾಖಲೆ ಕೊಹ್ಲಿ ಹೆಸರಿನಲ್ಲಿದೆ
ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಸಾರಸ್ಯವೆಂದರೆ ಕಿಂಗ್ ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧವೇ 183ರನ್ ಬಾರಿಸಿದ್ದರು. ಈ ಸಾಧನೆಯ ಪಟ್ಟಿಯಲ್ಲಿ ಬಾಬರ್ಗೆ(151) ದ್ವಿತೀಯ ಸ್ಥಾನ. ಮೂರನೇ ಸ್ಥಾನ ಯೂನಿಸ್ ಖಾನ್(144), ನಾಲ್ಕನೇ ಸ್ಥಾನ ಬಾಂಗ್ಲಾದ ಮುಸ್ಫಿಕರ್ ರಹಿಂ(144) ಪಡೆದಿದ್ದಾರೆ.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ರಾಹುಲ್; ಕೊಲಂಬೋದಲ್ಲಿ ಬ್ಯಾಟಿಂಗ್ ಅಭ್ಯಾಸ
ಮತ್ತೆ ಭಾರತ ಪಾಕ್ ಪಂದ್ಯ
ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್ನ(Asia Cup 2023) ಮೊದಲ ಪಂದ್ಯ ಮಳೆಯಿಂದ ರದ್ದಾದ ಕಾರಣ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲಾಗದ ಬೇಸರದಲ್ಲಿದ್ದ ಉಭಯ ದೇಶಗಳ ಅಭಿಮಾನಿಗಳಿಗೆ ಈ ಬಾರಿ ನಿರಾಸೆಯಾಗದು. ಇತ್ತಂಡಗಳ ಮಧ್ಯೆ ಮತ್ತೊಂದು ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 10ರಂದು ನಡೆಯುವ ಸೂಪರ್-4 ಸುತ್ತಿನ (Pakistan vs India Super Fours Match)ಪಂದ್ಯದಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಇರುವ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ ಎಂದು ತಿಳಿದುಬಂದಿದೆ.