ನವ ದೆಹಲಿ: ತಪ್ಪೇ ಮಾಡದ ಪಿ. ವಿ ಸಿಂಧೂ ಅವರಿಗೆ ಒಂದು ಪೆನಾಲ್ಟಿ ಅಂಕ ಕೊಟ್ಟ ಅಂಪೈರ್ ಪಂದ್ಯವನ್ನೇ ಕಳೆದುಕೊಳ್ಳುವಂತೆ ಮಾಡಿದ್ದರು. ಇದೀಗ ಅಂಪೈರ್ ಮಾಡಿದ್ದೇ ತಪ್ಪು ಎಂದು ತೀರ್ಮಾನಿಸಿರುವ Badminton ಏಷ್ಯಾದ ತಾಂತ್ರಿಕ ಸಮಿತಿ ಕ್ಷಮೆ ಕೋರಿದೆ.
ಟೂರ್ನಿ ನಡೆದಿದ್ದು ಕಳೆದ ಏಪ್ರಿಲ್‌ನಲ್ಲಿ. ಕ್ಷಮೆ ಕೋರಿದ್ದು ಸೋಮವಾರ. ಹೀಗಾಗಿ ಸಿಂಧೂ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಆದರೆ, ತಪ್ಪು ಸಿಂಧೂ ಅವರದ್ದಲ್ಲ ಎಂಬುದು ಸಾಬೀತಾಗಿದೆ.
ವಿವಾದ ಉಂಟಾಗಿರುವುದು ಏಪ್ರಿಲ್‌ನಲ್ಲಿ ನಡೆದ ಏಷ್ಯಾ ಚಾಂಪಿಯನ್‌ಷಿಪ್ ವೇಳೆ. ಜಪಾನ್‌ನ ಅಕಾನೆ ಯಮಗುಚಿ ವಿರುದ್ಧದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಮೊದಲ ಗೇಮ್ ಗೆದ್ದು ಎರಡನೇ ಗೇಮ್‌ನಲ್ಲಿ ಆಡುತ್ತಿದ್ದರು. ೧೪-೧೧ ಮುನ್ನಡೆಯನ್ನೂ ಪಡೆದುಕೊಂಡಿದ್ದ ಸಿಂಧೂ ಗೆಲುವು ತಮ್ಮದಾಗಿಸಿಕೊಳ್ಳಬಹುದಾಗಿತ್ತು. ಈ ವೇಳೆ ಸಿಂಧೂ ಸರ್ವ್ ಮಾಡಬೇಕಿತ್ತು. ಎದುರಾಳಿ ಯಮಗುಚಿ ಸಿದ್ಧರಾಗದ ಕಾರಣ ಸಿಂಧೂ ಸರ್ವ್ ಆರಂಭಿಸಿರಲಿಲ್ಲ. ಈ ವೇಳೆ ಅಂಪೈರ್ ನಿಗದಿತ ಅವಧಿಯೊಳಗೆ ಸರ್ವ್ ಮಾಡಿಲ್ಲ ಎಂದು ಸಿಂಧೂಗೆ ಒಂದು ಪೆನಾಲ್ಟಿ ಅಂಕದ ದಂಡ ವಿಧಿಸಿದ್ದರು.
ತಮ್ಮದೇನೂ ತಪ್ಪಿಲ್ಲ, ಎದುರಾಳಿ ತಯಾರಿಲ್ಲದ ಕಾರಣ ಸರ್ವ್ ಮಾಡಿಲ್ಲ ಎಂದು ಸಿಂಧೂ ಅಂಪೈರ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದಾಗ್ಯೂ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಿರಲಿಲ್ಲ. ಬಳಿಕ ಸಿಂಧೂ ಮ್ಯಾಚ್ ರೆಫರಿ ಬಳಿಯೂ ಮಾತನಾಡಿದ್ದರು. ಅವರೂ ಅಂಪೈರ್ ತೀರ್ಪು ಸರಿಯೆಂದು ಹೇಳಿದ ಬಳಿಕ ನಿರಾಸೆಗೊಂಡ ಸಿಂಧೂ ಕಣ್ಣೀರು ಹಾಕಿದ್ದರು. ಆಗಿರುವ ಅನ್ಯಾಯದಿಂದ ವಿಚಲಿತರಾದ ಅವರು ಆ ಗೇಮ್ ಸೋತರಲ್ಲದೆ, ಮುಂದಿನ ಗೇಮ್‌ನಲ್ಲೂ ಸೋಲು ಕಾಣುವ ಮೂಲಕ ಅನ್ಯಾಯವಾಗಿ ಫೈನ್‌ಗೇರುವ ಅವಕಾಶ ಕಳೆದುಕೊಂಡಿದ್ದರು.
ದೂರು ಸಲ್ಲಿಕೆ
ಪಂದ್ಯ ಮುಕ್ತಾಯಗೊಂಡ ಬಳಿಕ ಪಿ.ವಿ ಸಿಂಧೂ ಈ ಬಗ್ಗೆ ಬ್ಯಾಡ್ಮಿಂಟನ್ ಏಷ್ಯಾ ಸಂಸ್ಥೆಗೆ ದೂರು ನೀಡಿದ್ದರು. ದೂರಿನ ಬಗ್ಗೆ ತಾಂತ್ರಿಕ ಸಮಿತಿ ವಿಚಾರಣೆ ನಡೆಸಿದಾಗ ಸಿಂಧೂ ಅವರದ್ದು ತಪ್ಪಿರಲಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ “ಮಾನವ ಸಹಜ ತಪ್ಪು” ಎಂದು ತೀರ್ಮಾನ ತೆಗೆದುಕೊಂಡು ಸಿಂಧೂ ಬಳಿ ಕ್ಷಮೆ ಕೋರಿದೆ.
ಇದನ್ನೂ ಓದಿ: Happy Birthday ಪಿ. ವಿ ಸಿಂಧೂ