ಕಾಠ್ಮಂಡು : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ (Sexual Assault) ಎಸಗಿದ ಪ್ರಕರಣದಲ್ಲಿ ಜೈಲು ಸೇರಿದ್ದ ನೇಪಾಳದ ಕ್ರಿಕೆಟಿಗ ಸಂದೀಪ್ ಲಾಮಿಚಾನೆಗೆ ಅಲ್ಲಿನ ಹೈಕೋರ್ಟ್ ಜಾಮೀನು ನೀಡಿದೆ. ಕೆಳ ಹಂತದ ನ್ಯಾಯಾಲಯದ ನೀಡಿದ್ದ ಬಂಧನ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ. ಆದರೆ, ಪ್ರಕರಣ ಮುಗಿಯುವ ತನಕ ಕ್ರಿಕೆಟಿಗ ದೇಶ ಬಿಟ್ಟು ಹೋಗದಂತೆ ನಿರ್ದೇಶನ ನೀಡಿದೆ.
ನೇಪಾಳದ ಯುವ ಕ್ರಿಕೆಟಿಗ ಸಂದೀಪ್ ಮೇಲೆ ಅತ್ಯಾಚಾರ ಎಸಗಿದ್ದರೆಂಬ ಆರೋಪ ಕೇಳಿ ಬಂದಿತ್ತು. ದೂರು ದಾಖಲಾದ ವೇಳೆ ಅವರು ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುತ್ತಿದ್ದರು. ದೂರು ದಾಖಲಾದ ಬಳಿಕವೂ ಅವರು ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್ಗೆ ಹಾಜರುಪಡಿಸಿದ್ದರು.
ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳಿಂದ ಜೈಲಿನಲ್ಲಿದ್ದರು. ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. ಈ ವೇಳೆ 20 ಲಕ್ಷ ರೂಪಾಯಿ ಬಾಂಡ್ ಕೂಡ ಪಡೆದುಕೊಂಡಿದೆ.
ಜೈಲಿನಿಂದ ಬಂದ ಸಂದೀಪ್ ಅವರು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಈ ಕುರಿತ ಟ್ವೀಟ್ ಮಾಡಿರುವ ಅವರು ನಾನು ಅಮಾಯಕ ಹಾಗೂ ನ್ಯಾಯಾಲಯದ ಬಗ್ಗೆ ಸಂಪೂರ್ಣ ಭರವಸೆಯಿದೆ. ನಾನು ಸಿಪಿಎಲ್ನಿಂದ ಬಿಡುವು ಪಡೆದುಕೊಂಡಿದ್ದು, ನನ್ನ ದೇಶದಲ್ಲೇ ಉಳಿಯುವೆ. ನನ್ನ ಮೇಲೆ ಮಾಡಿರುವ ನಿರಾಧಾರ ಆರೋಪಗಳಿಗೆ ಉತ್ತರಿಸಲು ನಾನು ಸಿದ್ಧ. ಸೂಕ್ತ ನ್ಯಾಯ ದೊರೆಯುವ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲು; ಮಹಿಳಾ ಕೋಚ್ರಿಂದ ದೂರು