ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(paris olympics 2024) ವಿನೇಶ್ ಫೋಗಟ್(Vinesh Phogat) ಸೆಮಿಫೈನಲ್ ಪ್ರವೇಶ ಪಡೆಯುತ್ತಿದ್ದಂತೆ, ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್(Sakshi Malik) ಮತ್ತು ಬಜರಂಗ್ ಪೂನಿಯ(Bajrang Punia) ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ವಿನೇಶ್ ಸಾಧನೆಯನ್ನು ಕೊಂಡಾಡಿದ್ದಾರೆ. ಜತೆಗೆ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಜರಂಗ್, “ಜಗತನ್ನೇ ಗೆಲ್ಲಲು ಹೊರಟಿರುವ ವಿನೇಶಾ ಫೋಗಟ್ ಹಿಂದೊಮ್ಮೆ ತನ್ನದೇ ದೇಶದಲ್ಲಿ ಸೋಲು ಎದುರಿಸಿದ್ದಳು. ಲೈಗಿಂಕ ಕಿರುಕುಳದ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದ್ದ ಈಕೆಯ ಮೇಲೆ ತನ್ನದೇ ದೇಶದಲ್ಲಿ ಲಾಠಿಯಿಂದ ಹೊಡೆದು ದಮನಿಸಲಾಗಿತ್ತು. ಬೀದಿಯಲ್ಲಿ ಎಳೆದಾಡಿ ತುಳಿದು ಅವಾಮಾನಿಸಲಾಗಿತ್ತು. ಇಂದು ಈ ಹುಡುಗಿಯ ಸಾಧನೆಯ ಮುಂದೆ ದೇಶದ ವ್ಯವಸ್ಥೆ ಸೋಲು ಕಂಡಿದೆ” ಎಂದು ಬರೆದುಕೊಂಡಿದ್ದಾರೆ.
ಸಾಕ್ಷಿ ಮಲಿಕ್ ಕೂಡ ಟ್ವೀಟ್ ಮಾಡಿ, “ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಈ ಹುಡುಗಿಯನ್ನು ಯಾರು ಬೆಂಬಲಿಸಿಲ್ಲ. ಇಂದು ಇದೇ ಹುಡುಗಿ ದೇಶದ ಧ್ವಜವನ್ನು ಮತ್ತು ಹೆಸರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾಳೆ” ಎಂದು ಬರೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ತಿರುಗೇಟು ಕೊಟ್ಟಿದ್ದಾರೆ.
ವಿನೇಶ್ ಫೋಗಟ್ ಅವರು ಕುಸ್ತಿಯಲ್ಲಿ ಒಲಿಂಪಿಕ್ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೆ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. ಇಂದು ರಾತ್ರಿ 10.15ಕ್ಕೆ ನಡೆಯುವ ಫೈನಲ್ ಪಂದ್ಯದಲ್ಲಿ ವಿನೇಶ್ ಅವರು ಯುಸ್ನಿಲಿಸ್ ಗುಜ್ಮಾನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಉಕ್ರೇನ್ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರಾದ ಹಿನ್ನೆಲೆ ಇದನ್ನು ಖಂಡಿಸಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದರು. ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್ ಅವರೇ ಆಗಿದ್ದರು.