Site icon Vistara News

Asian Games 2023 : ಪ್ರತಿಭಟನೆ ಮಾಡಿದ ಕುಸ್ತಿಪಟುಗಳಿಗೆ ಟ್ರಯಲ್ಸ್ ಇಲ್ಲದೇ ನೇರ ಅರ್ಹತೆ!

Vinesh Phoghat

ನವ ದೆಹಲಿ: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್​ ವಿಜೇತೆ ವಿನೇಶ್ ಫೋಗಟ್ ಅವರಿಗೆ ಮುಂಬರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನೇರ ಪ್ರವೇಶ ನೀಡಲಾಗಿದೆ. ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ತಾತ್ಕಾಲಿಕ ಸಮಿತಿಯು ಕಳೆದ ವಾರ ರಾಷ್ಟ್ರೀಯ ತರಬೇತುದಾರರು ಮತ್ತು ತಜ್ಞರೊಂದಿಗೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಒಲಿಂಪಿಕ್ ಅಥವಾ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆದ್ದಿರುವಅಪ್ರತಿಮ ಸ್ಪರ್ಧಿಗಳನ್ನು ಟ್ರಯಲ್ಸ್​ಗೆ ಒಳಪಡಿಸದೇ ಪರಿಗಣಿಸಲು ಅವಕಾಶವಿದೆ. ಭಾರತೀಯ ಕುಸ್ತಿ ಫೆಡರೇಶನ್​ನ (ಡಬ್ಲ್ಯುಎಫ್ಐ) ನಿಯಮಗಳನ್ನು ಆಧರಿಸಿ ಬಜರಂಗ್ ಹಾಗೂ ವಿನೇಶ್​ಗೆ ಅವಕಾಶ ನೀಡಲಾಗಿದೆ. ವಿಶೇವೆಂದರೆ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಜಕಾರ್ತಾದಲ್ಲಿ ನಡೆದ 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕಗಳನ್ನು ಗಳಿಸಿದ ಏಕೈಕ ಭಾರತೀಯ ಕುಸ್ತಿಪಟುಗಳಾಗಿದ್ದರು.

ಈ ಅವಕಾಶವನ್ನು ಇತರ ನಾಲ್ವರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಸತ್ಯವರ್ತ್ ಕಡಿಯಾನ್, ಸಂಗೀತಾ ಫೋಗಟ್ ಮತ್ತು ಜಿತೇಂದ್ರ ಕಿನ್ಹಾ ಅವರಿಗೆ ವಿಸ್ತರಿಸದ ಕಾರಣ ವಿವಾದವೊಂದು ಹುಟ್ಟುಹಾಕಿದೆ. ವಿಶೇಷವೆಂದರೆ, ಈ ಎಲ್ಲಾ ನಾಲ್ವರು ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪದ ಮೇಲೆ ಮಾಜಿ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಕ್ರಿಯವಾಗಿ ಪ್ರತಿಭಟಿಸಿದ್ದರು.

ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಅವರು ಸ್ಪರ್ಧಿಸುವ ವಿಭಾಗ ಸೇರಿದಂತೆ ಎಲ್ಲಾ 18 ತೂಕ ವಿಭಾಗಗಳಿಗೆ ಆಯ್ಕೆ ಟ್ರಯಲ್ಸ್ ಇನ್ನೂ ನಡೆಯಲಿದೆ. ನೇರ ಅಯ್ಕೆ ಮಾಡಿದ ವಿಭಾಗದಲ್ಲಿ ಗೆದ್ದಿರುವ ಕುಸ್ತಿಪಟುಗಳು ಮೀಸಲು ಸ್ಪರ್ಧಿಗಳಾಗಿ ಇರುತ್ತಾರೆ.

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಅವರ ಪ್ರಭಾವಶಾಲಿ ಪ್ರದರ್ಶನವನ್ನು ಪರಿಗಣಿಸಿ ತಾತ್ಕಾಲಿಕ ಸಮಿತಿಯು ಟ್ರಯಲ್ಸ್​​ನಲ್ಲಿ ವಿನಾಯಿತಿ ನೀಡುವ ಬಗ್ಗೆ ಚರ್ಚಿಸಿತ್ತು. ಆದಾಗ್ಯೂ, ಮೊಣಕಾಲು ಗಾಯದಿಂದಾಗಿ ದಹಿಯಾ ಬಳಲಿರುವ ಕಾರಣ ಅವರ ಫಿಟ್ನೆಸ್ ಪರೀಕ್ಷೆ ಅಗತ್ಯವಾಗಿದೆ. ಅವರು ಕಳೆದ ಆರು ತಿಂಗಳುಗಳನ್ನು ಗಾಯದ ಪುನಶ್ಚೇತನದಲ್ಲಿ ಕಳೆದಿದ್ದರು. ಅದೇ ರೀತಿ ಅಭ್ಯಾಸ ಅವಧಿಗಳಲ್ಲಿ ಪಾಲ್ಗೊಂಡಿರಲಿಲ್ಲ..

ಟ್ರಯಲ್ಸ್ ಗೆ ಸಿದ್ಧತೆ ವಿಸ್ತರಣೆ ಕೋರಿದ ಕುಸ್ತಿಪಟುಗಳು

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರು ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಏಷ್ಯನ್ ಗೇಮ್ಸ್ ಟ್ರಯಲ್ಸ್​​ಗೆ ತಯಾರಿ ನಡೆಸಲು ಆಗಸ್ಟ್ 10 ರವರೆಗೆ ಸಮಯ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಏಷ್ಯನ್ ಕ್ರೀಡಾಕೂಟಕ್ಕಾಗಿ ಕುಸ್ತಿ ತಂಡದ ಪಟ್ಟಿಯನ್ನು ಅಂತಿಮಗೊಳಿಸಲು ಆಗಸ್ಟ್ 5 ರವರೆಗೆ ವಿಸ್ತರಣೆ ನೀಡುವಂತೆ ಐಒಎ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಅನ್ನು ಸಂಪರ್ಕಿಸಿದೆ. ಆದಾಗ್ಯೂ, ಒಸಿಎ ಕೇವಲ ಒಂದು ವಾರದ ವಿಸ್ತರಣೆಯನ್ನು ನೀಡಿದೆ ಮತ್ತು ಐಒಎ ಜುಲೈ 23 ರೊಳಗೆ ಕುಸ್ತಿ ತಂಡದ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

Exit mobile version