ಧರ್ಮಶಾಲಾ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ(BAN vs AFG) ವಿರುದ್ಧ ಬಾಂಗ್ಲಾದೇಶ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್ ನಡೆಸಿ 37.2 ಓವರ್ಗಳಲ್ಲಿ ಕೇವಲ 156 ರನ್ಗೆ ಕುಸಿಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 4 ವಿಕೆಟ್ನಷ್ಟಕ್ಕೆ 158 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ನಾಯಕನ ಆಟವಾಡಿದ ಶಕೀಬ್
ಬಾಂಗ್ಲಾ ತಂಡದ ಹಿರಿಯ ಆಲ್ರೌಂಡರ್ ಮತ್ತು ನಾಯಕನಾಗಿರುವ ಶಕೀಬ್ ಅಲ್ ಹಸನ್ ತಮ್ಮ ಸ್ಪಿನ್ ಜಾದು ಮೂಲಕ ಆಫ್ಘನ್ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಇವರಿಗೆ ಮೆಹದಿ ಹಸನ್ ಮಿರಾಜ್ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಮೆಹದಿ ಅವರ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಿತ್ತು. 9 ಓವರ್ ಎಸೆದು ಮೂರು ಮೇಡನ್ ಸಹಿತ ಮೂರು ವಿಕೆಟ್ ಉರುಳಿಸಿದರು. ಅದು ಕೂಡ 25 ರನ್ ವೆಚ್ಚದಲ್ಲಿ.
ನಾಟಕೀಯ ಕುಸಿತ ಕಂಡ ಆಫ್ಘನ್
ಉತ್ತಮ ಆರಂಭ ಪಡೆದ ಆಫ್ಘನ್ ಮೊದಲ ವಿಕೆಟ್ಗೆ 47 ರನ್ ಒಟ್ಟುಗೂಡಿಸಿತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್(47) ಮತ್ತು ಇಬ್ರಾಹಿಂ ಜದ್ರಾನ್(22) ಉತ್ತಮ ಅಡಿಪಾಯ ಹಾಕಿದರು. ಆದರೆ ಆ ಬಳಿಕ ಬಂದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲವಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮ ಹಂತದಲ್ಲಿ ಅಜ್ಮತುಲ್ಲಾ ಒಮರ್ಝೈ 22 ರನ್ ಬಾರಿಸಿದ ಪರಿಣಾಮ ತಂಡ ಕನಿಷ್ಠ 150ರ ಗಡಿ ದಾಟಿತು.
ಇದನ್ನೂ ಓದಿ IND vs AUS: ಭಾರತ-ಆಸೀಸ್ ವಿಶ್ವಕಪ್ ಪಂದ್ಯದ ಪಿಚ್ ರಿಪೋರ್ಟ್; ಹವಾಮಾನ ವರದಿಯಲ್ಲಿ ಅಡಗಿದೆ ಪಂದ್ಯದ ಭವಿಷ್ಯ
ಡೇಂಜರಸ್ ಬ್ಯಾಟರ್ ರಶೀದ್ ಖಾನ್(9) ಕೂಡ ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡರು. ಏಷ್ಯಾ ಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮೊಹಮ್ಮದ್ ನಬಿ(6) ಕೂಡ ಸಿಂಗಲ್ ಡಿಜಿಟ್ಗೆ ಸೀಮಿತಾದರು. ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕ್ಕಿದ್ದ ನವೀನ್ ಉಲ್ ಹಕ್ ಶೂನ್ಯ ಸಂಕಟಕ್ಕೆ ಸಿಲುಕಿದರು.
ಬ್ಯಾಟಿಂಗ್ನಲ್ಲಿಯೂ ಮಿಂಚಿದ ಮೆಹದಿ ಹಸನ್
ಬೌಲಿಂಗ್ನಲ್ಲಿ ಮೂರು ವಿಕೆಟ್ ಕೆಡವಿದ ಮೆಹದಿ ಹಸನ್ ಬ್ಯಾಟಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರು. 73 ಎಸೆತಗಳಿಂದ 57 ರನ್ ಬಾರಿಸಿ ಅರ್ಧಶತಕ ಬಾರಿಸಿದರು. ಅವರ ಈ ಇನಿಂಗ್ಸ್ನಲ್ಲಿ 5 ಬೌಂಡರಿ ದಾಖಲಾಯಿತು. ನಜ್ಮುಲ್ ಹೊಸೈನ್ ಶಾಂಟೊ(59) ಅಜೇಯ ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅರ್ಧಶತಕ ಇನಿಂಗ್ಸ್ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಶಕೀಬ್ 14 ರನ್ ಗಳಿಸಿ ಔಟಾದರು.