ಢಾಕಾ: ಪ್ರವಾಸಿ ಅಫಘಾನಿಸ್ತಾನ(BAN vs AFG) ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 546 ರನ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ಬಾಂಗ್ಲಾ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಅತಿ ಹೆಚ್ಚು ಮೊತ್ತದಿಂದ ಗೆದ್ದ ವಿಶ್ವದ ಮೂರನೇ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.
ಢಾಕಾದ ಶೇರ್ ‘ಎ’ ಬಾಂಗ್ಲಾ ಸ್ಟೇಡಿಯಂನಲ್ಲಿ(Shere Bangla National Stadium, Dhaka) ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಮೊದಲ ಇನಿಂಗ್ಸ್ನಲ್ಲಿ 382 ರನ್ ಗಳಿಸಿತು, ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ಅಫ್ಘಾನ್ ಕೇವಲ 146 ರನ್ಗೆ ಸರ್ವಪತನ ಕಂಡು 236 ರನ್ಗಳ ಹಿನ್ನಡೆ ಅನುಭವಿಸಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ ನಾಲ್ಕು ವಿಕೆಟ್ ನಷ್ಟಕ್ಕೆ 425 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು.
ಗೆಲುವಿಗೆ 662 ರನ್ ಗುರಿ ಪಡೆದ ಅಫ್ಘಾನ್ ತಂಡ 115 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು. ಗೆಲುವು ಕಂಡ ಬಾಂಗ್ಲಾ 2019ರ ಟೆಸ್ಟ್ ಸೋಲಿನ ಸೇಡಿಗೆ ಇಲ್ಲಿ ಭರ್ಜರಿಯಾಗಿ ತೀರಿಸಿಕೊಂಡಿತು. ಇದು ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್ನಲ್ಲಿ ಸಾಧಿಸಿದ ಅತ್ಯಧಿಕ ಮೊತ್ತದ ಗೆಲುವಾಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಗೆಲುವು ಇದಾಗಿದೆ. 1928ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 675 ರನ್‌ಗಳಿಂದ ಮಣಿಸಿದ್ದು ಇದುವರೆಗೆ ಅತಿ ದೊಡ್ಡ ಗೆಲುವಿನ ದಾಖಲೆಯಾಗಿದೆ. ಇದಾದ ಬಳಿಕ 1934ರಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು 562 ರನ್‌ಗಳಿಂದ ಮಣಿಸಿತ್ತು.
ಇದನ್ನೂ ಓದಿ ICC World Cup 2023: ವಿಶ್ವ ಕಪ್ ವಿಚಾರದಲ್ಲಿ ಹೊಸ ಕ್ಯಾತೆ ತೆಗೆದ ಪಾಕಿಸ್ತಾನ
As comprehensive as it gets 💪
— ICC (@ICC) June 17, 2023
Bangladesh were dominant in their one-off Test against Afghanistan! #BANvAFG | Details 👇 https://t.co/JYWnuAUbvS
ಬಾಂಗ್ಲಾ ಪರ ನಜ್ಮುಲ್ ಹುಸೇನ್ ಶಂಟೋ(Najmul Hossain Shanto) ಎರಡೂ ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಮೊದಲ ಇನಿಂಗ್ಸ್ ನಲ್ಲಿ 146 ರನ್ ಮಾಡಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 124 ರನ್ ಬಾರಿಸಿದ್ದರು. ಇವರ ಜತೆಗೆ ಮೊಮಿನಲ್ ಹಕ್ 121 ರನ್ ಗಳಿಸಿದ್ದರು. ಶತಕ ಬಾರಿಸಿ ಮಿಂಚಿದ ನಜ್ಮುಲ್ ಹುಸೇನ್ ಶಂಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.