ಕೋಲ್ಕತಾ: ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ನ 28ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಬಾಂಗ್ಲಾದೇಶ(BAN vs NED) ವಿರುದ್ಧ ಭರ್ಜರಿ 87 ರನ್ಗಳ ಗೆಲುವು ಸಾಧಿಸಿದೆ. ಸೋಲು ಕಂಡ ಬಾಂಗ್ಲಾ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇನ್ನು ಮೂರು ಪಂದ್ಯಗಳನ್ನು ಗೆದ್ದರೂ ಬಾಂಗ್ಲಾಗೆ ಸೆಮಿಫೈನಲ್ ಪ್ರವೇಶ ಕಷ್ಟ ಸಾಧ್ಯ.
ಶನಿವಾರದ ವಿಶ್ವಕಪ್ನ ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೆದರ್ಲೆಂಡ್ಸ್ ಎಂದಿನಂತೆ ಆರಂಭಿಕ ಆಘಾತ ಕಂಡು ಆ ಬಳಿಕ ಚೇತರಿಸಿ ಭರ್ತಿ 50 ಓವರ್ ಆಡಿ 229ಕ್ಕೆ ಆಲೌಟ್ ಆಯಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ನಾಟಕೀಯ ಕುಸಿತ ಕಂಡು 42.2 ಓವರ್ಗಳಲ್ಲಿ 142 ರನ್ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಪಂದ್ಯ ಗೆದ್ದ ನೆದರ್ಲೆಂಡ್ಸ್ 4 ಅಂಕದೊಂದಿಗೆ ಕೊನೆಯ ಸ್ಥಾನದಿಂದ ಮೇಲೇರಿ 8ನೇ ಸ್ಥಾನಕ್ಕೇರಿತು.
ಘಾತಕ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ
ಡಚ್ಚರ ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿಗೆ ತಡೆಯೊಡ್ಡಿ ಬಾಂಗ್ಲಾ ಹುಲಿಗಳು ಸಂಪೂರ್ಣವಾಗಿ ವಿಫಲರಾದರು. ಬಲಿಷ್ಠ ಆಟಗಾರರಾದ ಲಿಟ್ಟನ್ ದಾಸ್(3), ತಂಜಿದ್ ಹಸನ್(15), ನಜ್ಮುಲ್ ಹೊಸೈನ್ ಶಾಂಟೊ(9), ನಾಯಕ ಶಕೀಬ್ ಅಲ್ ಹಸನ್(5) ಮತ್ತು ಅನುಭವಿ ಮುಶ್ಫಿಕರ್ ರಹೀಮ್(1) ಒಂದಂಕಿಗೆ ಔಟಾಗುವ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು. ಯಾರು ಕೂಡ ತಂಡವನ್ನು ಆಧರಿಸಲು ಸಾಧ್ಯವಾಗಲಿಲ್ಲ. ತಂಡದ ಮೊತ್ತ 100 ಆಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸೋಲು ಖಚಿತಪಡಿಸಿತು.
ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ಮೆಹದಿ ಹಸನ್(35) ಅವರದ್ದೇ ಅತ್ಯಧಿಕ ಗಳಿಕೆ. ಇವರನ್ನು ಹೊರತುಪಡಿಸಿ 20 ರನ್ ಬಾರಿಸಿದ ಮೊಹಮ್ಮದುಲ್ಲ ಅವರದ್ದೇ ದ್ವಿತೀಯ ಅತ್ಯಧಿಕ ಗಳಿಕೆಯಾಗಿದೆ. ಉಳಿದ ಎಲ್ಲ ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಕಂಡಿದ್ದು ಸೋಲಿಗೆ ಪ್ರಮುಖ ಕಾರಣ.
ಅರ್ಧಶತಕ ಬಾರಿಸಿದ ಸ್ಕಾಟ್ ಎಡ್ವರ್ಡ್ಸ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ತನ್ನ ಎಂದಿನ ಶೈಲಿಯಂತೆ ಆರಂಭಿಕ ಆಘಾತ ಎದುರಿಸಿ, ಆ ಬಳಿಕ ಉತ್ತಮ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ಸು ಕಂಡಿತು. ಬ್ಯಾಟಿಂಗ್ ಭಡ್ತಿ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಸ್ಕಾಟ್ ಎಡ್ವರ್ಡ್ಸ್ 68 ರನ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ವೆಸ್ಲಿ ಬ್ಯಾರೆಸಿ ಅವರು 41 ರನ್ ಬಾರಿಸಿ ತಂಡಕ್ಕೆ ನೆರವಾದರು. ಅಂತಿಮ ಹಂತದಲ್ಲಿ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್(35) ಮತ್ತು ಲೋಗನ್ ವ್ಯಾನ್ ಬೀಕ್ ಅಜೇಯ 23 ರನ್ ಬಾರಿಸಿದ ಪರಿಣಾಮ ತಂಡ 200ರ ಗಡಿ ದಾಡಿತು. ಬೌಲಿಂಗ್ನಲ್ಲಿ ಪಾಲ್ ವ್ಯಾನ್ ಮೀಕೆರೆನ್ 4 ವಿಕೆಟ್ ಕಿತ್ತು ಮಿಂಚಿದರು. ಆಲ್ರೌಂಡರ್ ಬಾಸ್ ಡಿ ಲೀಡೆ 2 ವಿಕೆಟ್ ಕೆಡವಿದರು.
ಇದನ್ನೂ ಓದಿ AUS vs NZ: ಶತಕ ಬಾರಿಸಿ ವಿಶ್ವಕಪ್ನಲ್ಲಿ ಸಚಿನ್ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ
ಪಾತಾಳಕ್ಕೆ ಕುಸಿದ ಇಂಗ್ಲೆಂಡ್
ನೆದರ್ಲೆಂಡ್ಸ್ನ ಈ ಗೆಲುವಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಪಾತಾಳಕ್ಕೆ ಕುಸಿದಿದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಇಂಗ್ಲೆಂಡ್ ತಂಡ ಅನುಭವಿಸಿದ ಬಾರಿ ಅವಮಾನವಾಗಿದೆ. ಇಷ್ಟರವರೆಗೂ ಕೊನೆಯ ಸ್ಥಾನವನ್ನು ಪಡೆದಿರಲಿಲ್ಲ. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಆರಂಭಿಕ 2 ವಿಶ್ವಕಪ್ ಗೆದ್ದ ವಿಂಡೀಸ್ ತಂಡವೇ ವಿಶ್ವಕಪ್ಗೆ ಅರ್ಹತೆ ಪಡೆದಿಲ್ಲ ಎನ್ನುವಾಗ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಈ ಸ್ಥಿತಿ ಎದುರಾಗಿರುವುದರಲ್ಲಿ ಅಚ್ಚರಿಯಿಲ್ಲ. ಕ್ರಿಕೆಟ್ನಲ್ಲಿ ಏನು ಬೇಕಾದರೂ ಸಂಭವಿಸಬಹುದು ಎನ್ನುವುದಕ್ಕೆ ಇದುವೇ ಉತ್ತಮ ನಿದರ್ಶನ.