ಕಿಂಗ್‌ಸ್ಟನ್: ತಂಜಿಮ್ ಹಸನ್ ಸಾಕಿಬ್(7ಕ್ಕೆ 4) ಅವರ ಘಾತಕ ಬೌಲಿಂಗ್ ದಾಳಿಯ ನೆರವಿನಿಂದಾಗಿ ಸೂಪರ್-8 ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ(BAN vs NEP) ಮೇಲುಗೈ ಸಾಧಿಸಿದೆ. ನೇಪಾಳ ವಿರುದ್ಧ 21 ರನ್ ಅಂತರದಿಂದ ಗೆದ್ದು ಸೂಪರ್-8ಗೆ ಪ್ರವೇಶ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡದ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾ ಗೆಲುವಿನಿಂದ ನೆದರ್ಲೆಂಡ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿತು.
ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 19.3 ಓವರ್ಗಳಲ್ಲಿ ಕೇವಲ 106 ರನ್ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿ ನಡೆಸಿ ನೇಪಾಳವನ್ನು 85 ರನ್ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು.
ಬಾಂಗ್ಲಾದೇಶ ಈ ಪಂದ್ಯದಲ್ಲಿ ಸೋಲು ಕಾಣುತ್ತಿದ್ದರೆ, ನೆದರ್ಲೆಂಡ್ಸ್ ತಂಡಕ್ಕೂ ಸೂಪರ್-8 ಹಂತಕ್ಕೇರುವ ಅವಕಾಶವಿತ್ತು. ಆದರೆ ಬಾಂಗ್ಲಾ ಗೆಲುವಿನಿಂದ ನೆದರ್ಲೆಂಡ್ಸ್ ತಂಡ ಹೊರಬಿದ್ದಿತು. ನೆದರ್ಲೆಂಡ್ಸ್ ತಂಡ ಲಂಕಾ ವಿರುದ್ಧ 83 ರನ್ ಅಂತರದ ಸೋಲು ಕಂಡಿತು. ಈ ಪಂದ್ಯ ಗೆದ್ದಿದ್ದರೂ ಕೂಡ ನೆದರ್ಲೆಂಡ್ಸ್ಗೆ ಯಾವುದೇ ಲಾಭವಾಗುತ್ತಿರಲಿಲ್ಲ.
ಸಣ್ಣ ಮೊತ್ತವನ್ನು ಚೇಸಿಂಗ್ ನಡೆಸಿದ ನೇಪಾಳ ಆರಂಭಿಕ ಆಘಾತ ಎದುರಿಸಿದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಕುಶಾಲ್ ಮಲ್ಲ ಮತ್ತು ದೀಪೇಂದ್ರ ಸಿಂಗ್ ಐರಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದ ಕಾರಣ ತಂಡ ಚೇತರಿಕೆಯ ಹಾದಿಗೆ ಮರಳಿ ಗೆಲುವು ಕಾಣುವ ಸ್ಥಿತಿಯಲ್ಲಿತ್ತು. ಆದರೆ, ಮುಸ್ತಫಿಜುರ್ ರೆಹಮಾನ್ ಅವರು ಉಭತ ಆಟಗಾರರ ವಿಕೆಟ್ ಬೇಟೆಯಾಡಿ ಬಾಂಗ್ಲಾಗೆ ಯಶಸ್ಸು ತಂದುಕೊಟ್ಟರು. ಕುಶಾಲ್ ಮಲ್ಲ 27 ರನ್ ಬಾರಿಸಿದರೆ, ದೀಪೇಂದ್ರ ಸಿಂಗ್ 25 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ನೆಪಾಳ ಸೋಲು ಕೂಡ ಖಚಿತಗೊಂಡಿತು.
ಇದನ್ನೂ ಓದಿ T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್ ಪಡೆ ಸೂಪರ್ 8ಕ್ಕೆ ಎಂಟ್ರಿ
ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್ ಎಸೆದು 2 ಮೇಡನ್ ಸಹಿತ ಕೇವಲ 7 ರನ್ಗೆ 4 ವಿಕೆಟ್ ಕಿತ್ತು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್ಗೆ 3 ವಿಕೆಟ್ ಪಡೆದರು. ನಾಯಕ ಶಕೀಬ್ 2 ವಿಕೆಟ್ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತರೆ ಬ್ರೋಕನ್ ಹ್ಯಾಟ್ರಿಕ್ ವಿಕೆಟ್ ಕಿತ್ತ ದಾಖಲೆ ಮಾಡಲಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ತಂಡ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಆಟಗಾರರು ಕೂಡ ಸತತವಾಗಿ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪರೇಡ್ ನಡೆಸಿದರು. ನಾಯಕ ಶಕೀಬ್ ಅಲ್ ಹಸನ್ 17 ರನ್ ಬಾರಿಸಿದ್ದೇ ತಂಡದ ಪರ ಆಟಗಾರನೊಬ್ಬ ಬಾರಿಸಿದ ಗರಿಷ್ಠ ಸ್ಕೋರ್. ನೇಪಾಳ ಪರ ಸೋಂಪಾಲ್ ಕಾಮಿ(2), ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇದೀಗ ನಿರಪರಾಧಿ ಎನಿಸಿಕೊಂಡಿರುವ ಸಂದೀಪ್ ಲಮಿಚಾನೆ(2), ನಾಯಕ ರೋಹಿತ್ ಪೌಡೆಲ್(2) ಮತ್ತು ದೀಪೇಂದ್ರ ಸಿಂಗ್(2) ವಿಕೆಟ್ ಕಿತ್ತರು.