ನವದೆಹಲಿ: ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದ(Delhi, NCR Air Pollution) ಕಾರಣ ಬಾಂಗ್ಲಾದೇಶ ಹಾಗೂ ಶ್ರೀಲಂಕಾ(BAN vs SL) ತಂಡದ ಆಟಗಾರರು ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಅಲ್ಲದೆ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈಗಾಗಕಲೇ ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಹಲವರಲ್ಲಿ ಉಸಿರಾಟದ ಸಮಸ್ಯೆ, ಆಮ್ಲಜನಕ ಕೊರತೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ನವೆಂಬರ್ 6 ರಂದು ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಇಲ್ಲಿಗೆ ತಲುಪಿದ್ದು. ಅಭ್ಯಾಸ ಆರಂಭಿಸುವ ಯೋಜನೆಯಲ್ಲಿದ್ದರು. ಆದರೆ ವಿಪರೀತ ವಾಯು ಮಾಲಿನ್ಯದ ಕಾರಣ ಅಭ್ಯಾಸ ಪಂದ್ಯವನ್ನು ರದ್ದು ಮಾಡಿದೆ.
ಕೆಲ ಆಟಗಾರರು ವಾಯು ಮಾಲಿನ್ಯದ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿಯಾಗಿದೆ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಅಭ್ಯಾಸವನ್ನು ರದ್ದು ಮಾಡಲಾಗಿದೆ ಎಂದು ಉಭಯ ತಂಡಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಪಂದ್ಯ ಆಡುವ ವೇಳೆಯೂ ಇದೇ ರೀತಿಯ ವಾತಾವರಣ ಇದ್ದರೆ ಆಟಗಾರರ ಪಂದ್ಯವನ್ನು ಆಡದಿರಲು ನಿರ್ಧರಿಸಿರುವುದಾಗಿಯೂ ವರದಿಯಾಗಿದೆ. ಅಲ್ಲದೆ ದೆಹಲಿಯ ಎಲ್ಲ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಇತರ ತಂಡಗಳಿಂದಲೂ ಒತ್ತಾಯ ಕೇಳಿಬಂದಿದೆ.
ಸ್ಪಷ್ಟನೆ ನೀಡಿದ ಬಿಸಿಸಿಐ
ದೆಹಲಿಯಲ್ಲಿ ಧೂಳು ಹಾಗೂ ಹೊಗೆ ಆವರಿಸಿಕೊಂಡಿದೆ. ಇದರಿಂದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತನ್ನ ಅಭ್ಯಾಸವನ್ನು ರದ್ದು ಮಾಡಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. ಸದ್ಯಕ್ಕೆ ಪಂದ್ಯ ಸ್ಥಳಾಂತರ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಪೂರ್ವ ನಿಗದಿಯಂತೆ ದೆಹಲಿಯಲ್ಲಿ ಪಂದ್ಯ ನಡೆಯಲಿದೆ ಎಂದು ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ. ಒಂದೊಮ್ಮೆ ವಿಪರೀತ ವಾಯು ಗುಣಮಟ್ಟ ಕುಸಿದರೆ ಆಗ ಇದರ ಬಗ್ಗೆ ಯೋಚಿಸಲಾಗುವುದು ಎಂದರು.
ಬಾಂಗ್ಲಾದೇಶ ಈಗಾಗಲೇ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಹೀಗಾಗಿ ಈ ತಂಡಕ್ಕೆ ಪಂದ್ಯ ನಡೆಯದಿದ್ದರೂ ಯಾವುದೇ ನಷ್ಟ ಸಂಭವಿಸದು. ಆದರೆ ಲಂಕಾಗೆ ಮುಂದಿನ ಪಂದ್ಯ ಗೆದ್ದರೆ ಹಲವು ಲೆಕ್ಕಾಚಾರದ ಮೂಲಕ ಇನ್ನೂ ಸೆಮಿ ಅವಕಾಶವಿದೆ. ಹೀಗಾಗಿ ಲಂಕಾ ಪಾಲಿಗೆ ಇದು ಪ್ರಮುಖ ಪಂದ್ಯವಾಗಿದೆ.
ಪಾಕ್ ಸೆಮಿ ಆಸೆ ಜೀವಂತ
ಪಾಕಿಸ್ತಾನ ತಂಡ ಶನಿವಾರದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ಬಳಿಕ ಸೆಮಿ ರೇಸ್ ಇನ್ನಷ್ಟು ಪೈಪೋಟಿಗೆ ಬಿದ್ದಿದೆ. ಸದ್ಯ ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದನ್ನೂ ಗೆದ್ದರೆ 10 ಅಂಕ ಆಗಲಿದೆ. 8 ಅಂಕದಲ್ಲಿರುವ ನ್ಯೂಜಿಲ್ಯಾಂಡ್ ಮುಂದಿನ ಪಂದ್ಯದಲ್ಲಿ ಸೋತರೆ ಆಫ್ಘನ್ ಕೂಡ ಸೋತರೆ ಆಗ ಈ ಲಾಭ ಪಾಕಿಸ್ತಾನಕ್ಕೆ ಸಿಗಲಿದೆ. ಹೀಗೆ ಬಾಂಗ್ಲಾದೇಶ ಹೊರತುಪಡಿಸಿ ಉಳಿದ ಎಲ್ಲ ತಂಡಗಳು ಸೆಮಿ ಲೆಕ್ಕಾಚಾರದಲ್ಲಿ ಪಂದ್ಯವನ್ನು ಆಡುತ್ತಿದೆ.