Site icon Vistara News

BAN vs SL: ಲಂಕಾ ಬೌಲಿಂಗ್​ ದಾಳಿಗೆ ಕುಸಿದ ಬಾಂಗ್ಲಾ

Pallekele International Cricket Stadium, Pallekele

ಪಲ್ಲೆಕೆಲೆ: ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಆಡಲಿಳಿದ ಬಾಂಗ್ಲಾದೇಶ(Bangladesh vs Sri Lanka) ತಂಡ ಹಾಲಿ ಚಾಂಪಿಯನ್​ ಶ್ರೀಲಂಕಾ ವಿರುದ್ಧ ಅಲ್ಪ ಮೊತ್ತದ ರನ್​ ಗಳಿಸಿ ಸವಾಲೊಡ್ಡಿದೆ. ನಜ್ಮುಲ್ ಹೊಸೈನ್ ಶಾಂಟೊ(89) ಅವರ ಏಕಾಂಗಿ ಹೋರಾಟ ಬಾಂಗ್ಲಾ ತಂಡದ ಮಾನ ಉಳಿಸಿತು. ಲಂಕಾ ಪರ ಜೂನಿಯರ್​ ಮಾಲಿಂಗ ಖ್ಯಾತಿಯ ಮತೀಶ ಪತಿರಣ ಪ್ರಮುಖ 4 ವಿಕೆಟ್​ ಕಿತ್ತು ಮಿಂಚಿದರು.

ಶ್ರೀಲಂಕಾದ ಪಲ್ಲೆಕೆಲೆ(Pallekele) ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ(Asia cup 2023) ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಕುಂಟುತಾ ಸಾಗಿ 42.4 ಓವರ್​ನಲ್ಲಿ 164 ರನ್​ ಗಳಿಸಿ ಸರ್ವಪತನ ಕಂಡಿತು. ಶ್ರೀಲಂಕಾ ಗೆಲುವಿಗೆ 165 ರನ್​ ಬಾರಿಸಬೇಕಿದೆ.

ನಜ್ಮುಲ್ ಹೊಸೈನ್ ಏಕಾಂಗಿ ಹೋರಾಟ

ನಂಬುಗೆಯ ಬ್ಯಾಟರ್​ಗಳೆಲ್ಲ ವಿಕೆಟ್​ ಕೈಚೆಲ್ಲಿ ಪೆವಿಲಿಯನ್​ ಸೇರಿದಾಗ ಟೊಂಕ ಕಟ್ಟಿ ನಿಂತ ಮಧ್ಯಮ ಕ್ರಮಾಂಕದ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ ಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. ಒಂದು ಕಡೆ ವಿಕೆಟ್​ ಬೀಳುತ್ತಿದ್ದರೂ ಅವರು ತಂಡಕ್ಕೆ ಆಸರೆಯಾಗಿ ನಿಂತು 89 ರನ್​ ಬಾರಿಸಿದರು. ತಂಡ ಗಳಿಸಿದ ಅರ್ಧ ಪಾಲು ಮೊತ್ತ ಇವರದ್ದೇ ಆಗಿದೆ. ಉಳಿದ ಬಹುತೇಕ ಆಟಗಾರರದ್ದು ಸಿಂಗಲ್​ ಡಿಜಿಟ್​ ಮೊತ್ತವಾಗಿದೆ. ಇವರು ಕೂಡ ತಂಡಕ್ಕೆ ಆಸರೆಯಾಗದೇ ಹೋಗಿದ್ದರೆ ತಂಡ 50 ರನ್​ಗಳ ಮೊತ್ತವನ್ನೂ ದಾಖಲಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಶೋಚನೀಯವಾಗಿತ್ತು ಬಾಂಗ್ಲಾ ಆಟಗಾರರ ಪ್ರದರ್ಶನ.

ಇದನ್ನೂ ಓದಿ Asia Cup 2023: ಪಾಕ್​ ವಿರುದ್ಧದ ಪಂದ್ಯಕ್ಕೆ ರಣತಂತ್ರ ರೂಪಿಸಿದ ರೋಹಿತ್​ ಶರ್ಮ

6 ವರ್ಷಗಳ ಬಳಿಕ ಬಾಂಗ್ಲಾ ಏಕದಿನ ತಂಡವನ್ನು ಮುನ್ನಡೆಸಿದ ನಾಯಕ ಶಕೀಬ್​ ಅಲ್​ ಹಸನ್​ ಕೇವಲ 5 ರನ್​ಗೆ ಆಟ ಮುಗಿಸಿದರು. ಲಂಕಾ ಪರ ಈ ಬಾರಿಯ ಐಪಿಎಲ್​ನಲ್ಲಿ ಯಾರ್ಕರ್​ಗಳ ಮೂಲಕ ಗಮನ ಸೆಳೆದ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಿದ್ದ ಮತೀಶ ಪತಿರಣ 7.4 ಓವರ್​ ಎಸೆದು ಕೇವಲ 32 ರನ್​ ವೆಚ್ಚದಲ್ಲಿ ಪ್ರಮುಖ 4 ವಿಕೆಟ್​ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್​ ನೀಡಿದ ಸ್ಪಿನ್ನರ್ ಮಹೀಶ್‌ ತೀಕ್ಷಣ 8 ಓವರ್​ ಎಸೆದು ಒಂದು ಮೇಡನ್​ ಸಹಿತ ಕೇವಲ 19 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಕಬಳಿಸಿದರು.​

ತಮಿಮ್‌ ಇಕ್ಬಾಲ್‌, ಇಬಾದತ್‌ ಹುಸೇನ್‌ ಮತ್ತು ಲಿಟ್ಟನ್​ ದಾಸ್ ಅವರ ಅನುಪಸ್ಥಿತಿ ಬಾಂಗ್ಲಾ ಪಾಳಯದಲ್ಲಿ ಎದ್ದು ಕಾಣುತ್ತಿತ್ತು. ಲಿಟ್ಟನ್​ ದಾಸ್​ ಅವರು ವೈರಲ್​ ಜ್ವರದಿಂದಾಗಿ ಬುಧವಾರ ತಂಡದಿಂದ ಹೊರಬಿದ್ದಿದ್ದರು.

ಉಭಯ ತಂಡಗಳ ಆಡುವ ಬಳಗ

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ಉಪನಾಯಕ),ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಗೆ, ಮಹೀಶ್ ತೀಕ್ಷಣ, ಮಥೀಶ ಪತಿರಾಣ, ಕಸುನ್ ರಜಿತ.

ಬಾಂಗ್ಲಾದೇಶ: ಮೊಹಮ್ಮದ್​ ನೈಬ್​, ಶಾಕಿಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ತೌಹೀದ್ ಹೃದಯೋಯ್, ತಂಝೀದ್ ಹಸನ್​, ಮುಶ್ಫಿಕರ್ ರಹೀಮ್, ಮೆಹದಿ ಹಸನ್​, ಮೆಹದಿ ಹಸನ್ ಮಿರಾಜ್,ತಸ್ಕಿನ್ ಅಹ್ಮದ್, ಶೋರ್ಫುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್.

Exit mobile version