ನವದೆಹಲಿ: ದೆಹಲಿಯಲ್ಲಿ ತೀರಾ ಹದಗೆಟ್ಟಿರುವ ಗಾಳಿಯ ಗುಣಮಟ್ಟದ ನಡುವೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ವಿಶ್ವಕಪ್ನ 38ನೇ ಪಂದ್ಯದಲ್ಲಿ ಆಡಲು ಸಜ್ಜಾಗಿದೆ. ವಾಯು ಮಾಲಿನ್ಯದಿಂದಾಗಿ ಉಭಯ ಆಟಗಾರರು ತಮ್ಮ ಅಭ್ಯಾಸವನ್ನು ಮೊಟಕುಗೊಳಿಸಿದ್ದರು. ಇದೀಗ ಸೋಮವಾರ ಪಂದ್ಯ ನಡೆಯಲಿದೆಯಾ ಎಂಬ ಅನುಮಾನ ಮೂಡಿದೆ.
ಗೆದ್ದರೂ ಲಾಭವಿಲ್ಲ
ಬಾಂಗ್ಲಾದೇಶ ಈಗಾಗಲೇ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಬಾಂಗ್ಲಾದೇಶಕ್ಕೆ ಈ ಪಂದ್ಯ ಗೆದ್ದರೂ ಯಾವುದೇ ಲಾಭವಾಗದು. ಆದರೆ ಸದ್ಯ 7 ಪಂಂದ್ಯ ಆಡಿ 4 ಅಂಕ ಪಡೆದಿರುವ ಶ್ರೀಲಂಕಾ ತಂಡಕ್ಕೆ ಈ ಪಂದ್ಯದಲ್ಲಿ ಗೆದ್ದರೆ ಸೆಮಿ ಆಸೆ ಜೀವಂತವಿರಲಿದೆ. ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಭಾರತ ವಿರುದ್ಧದ ಪಂದ್ಯದಲ್ಲಿ 55 ರನ್ಗೆ ಕುಸಿದ ಲಂಕಾ ತಂಡ ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಸದ್ಯದ ಕುತೂಹಲ. ರನ್ ರೇಟ್ ಕೂಡ ಹೆಚ್ಚಿಸುವ ನಿಟ್ಟಿನಲ್ಲಿ ಲಂಕಾ ಈ ಪಂದ್ಯವನ್ನು ಭಾರಿ ಅಂತರದಲ್ಲಿ ಗೆಲ್ಲಬೇಕು. ಕೇವಲ ಗೆಲುವೊಂದೆ ಸಾಲದು.
ಹವಾಮಾನ ವರದಿ
ಈ ಪಂದ್ಯಕ್ಕೆ ಸದ್ಯ ಮಳೆಯ ಕಾಟ ಇಲ್ಲ. ಆದರೆ ವಾಯುಮಾಲಿನ್ಯ ಪ್ರಮಾಣವು (Delhi Air Pollution) ದಿನೇದಿನೆ ಜಾಸ್ತಿಯಾಗುತ್ತಿದೆ. ಇದೇ ಕಾರಣಕ್ಕೆ ದೆಹಲಿ ಸರ್ಕಾರವು (Delhi Government) ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು 5ನೇ ತರಗತಿವರೆಗಿನ ಶಾಲೆಗಳಿಗೆ ನವೆಂಬರ್ 10ರವರೆಗೆ ರಜೆ ಘೋಷಿಸಿದೆ.
ಇದನ್ನೂ ಓದಿ Virat Kohli: ವಿಶ್ವಕಪ್ನಲ್ಲಿ ನೂತನ ಮೈಲಿಗಲ್ಲು ತಲುಪಿದ ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ
ಉಭಯ ತಂಡಗಳ ಆಟಗಾರರು ಕೂಡ ವಾಯುಮಾಲಿನ್ಯ ಸಮಸ್ಯೆಯಿಂದಾಗಿ ಅಭ್ಯಾಸ ರದ್ದು ಮಾಡಿದ್ದರು. ಅಲ್ಲದೆ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಮನವಿಯನ್ನು ಮಾಡಿದ್ದರು. ಆದರೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್, ಸದ್ಯಕ್ಕೆ ಪಂದ್ಯ ಸ್ಥಳಾಂತರ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಪೂರ್ವ ನಿಗದಿಯಂತೆ ದೆಹಲಿಯಲ್ಲಿ ಪಂದ್ಯ ನಡೆಯಲಿದೆ ಎಂದು ಹೇಳಿದ್ದರು. ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಾಂಗ್ಲಾ ಕೋಚ್ ದೆಹಲಿಯಲ್ಲಿ ಉಸಿರಾಟಕ್ಕೆ ಗಾಳಿ ಯೋಗ್ಯವಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸತತ ಆರನೇ ದಿನವೂ ಗಾಳಿಯ ಗುಣಮಟ್ಟವು ತೀರಾ ಹದಗೆಟ್ಟಿದೆ. ಭಾನುವಾರ (ನವೆಂಬರ್ 5) ಬೆಳಗ್ಗೆ ಗಾಳಿ ಗುಣಮಟ್ಟ ಸೂಚ್ಯಂಕದಲ್ಲಿ 460 ರೇಟಿಂಗ್ ಇದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಉಸಿರಾಟದ ಸಮಸ್ಯೆ, ಕಣ್ಣಿನ ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ಅದರಲ್ಲೂ, ವಾಯುಮಾಲಿನ್ಯ ಪ್ರಮಾಣ ಜಾಸ್ತಿಯೇ ಆಗುತ್ತಿರುವುದರಿಂದ ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಇದನ್ನೂ ಓದಿ IND vs SA: ಕೊಹ್ಲಿಯೂ ಬೌಲಿಂಗ್ ನಡೆಸಲಿದ್ದಾರೆ; ಸುಳಿವು ನೀಡಿದ ದ್ರಾವಿಡ್
ಪಿಚ್ ರಿಪೋರ್ಟ್
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಇದು ಬ್ಯಾಟರ್ಗಳ ಸರ್ಗದ ತಾಣ. ಬೌಲರ್ಗಳು ಸರಿಯಾಗಿ ದಂಡಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ. ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಲಂಕಾ ನಡುವಣ ಪಂದ್ಯದಲ್ಲಿ ಒಟ್ಟು 754 ರನ್ ದಾಖಲಾಗಿತ್ತು. ಮತ್ತು ಆಸೀಸ್ ಕೂಡ ನೆದರ್ಲೆಂಡ್ಸ್ ವಿರುದ್ಧ 399 ರನ್ ಬಾರಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿಯೂ ರನ್ ಮಳೆಯೇ ಸುರಿಯುವ ನಿರೀಕ್ಷೆ ಇದೆ. ಬೌಲರ್ಗಳು ಇಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಸ್ಪಿನ್ ಬೌಲರ್ಗಳ ಆಟ ಇಲ್ಲಿ ನಡೆಯದು.
ಸಂಭಾವ್ಯ ತಂಡಗಳು
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಬಾಂಗ್ಲಾದೇಶ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ತೌಹಿದ್ ಹೃದಯೋಯ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.