ಚೆನ್ನೈ: ಈಗಾಗಲೇ ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ನ್ಯೂಜಿಲ್ಯಾಂಡ್ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಶುಕ್ರವಾರ ನಡೆಯುವ ವಿಶ್ವಕಪ್ನ 11ನೇ ಪಂದ್ಯದಲ್ಲಿ ಬಾಂಗ್ಲಾದೇಶದ(
New Zealand vs Bangladesh) ಸವಾಲು ಎದುರಿಸಲಿದೆ. ಈ ಪಂದ್ಯ ಚೆನ್ನೈಯ ಎಂ.ಎ ಚಿದಂಬರಂ(MA Chidambaram Stadium, Chennai) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ವಿಶ್ವಕಪ್ ಮುಖಾಮುಖಿ
ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ 1999ರಿಂದ ಇದುವರೆಗೆ 5 ಬಾರಿ ವಿಶ್ವಕಪ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಐದೂ ಪಂದ್ಯಗಳಲ್ಲಿಯೂ ನ್ಯೂಜಿಲ್ಯಾಂಡ್ ಗೆದ್ದು ಬೀಗಿದೆ. ಸಾರಸ್ಯವೆಂದರೆ ಎಲ್ಲ ಪಂದ್ಯಗಳನ್ನು ವಿಕೆಟ್ ಆಧಾರದಲ್ಲೇ ಕಿವಿಸ್ ಗೆದ್ದಿದೆ. ಏಕದಿನ ಕ್ರಿಕೆಟ್ನಲ್ಲಿ ಒಟ್ಟಾರೆಯಾಗಿ ಇತ್ತಂಡಗಳು 41 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಬಾಂಗ್ಲಾ ಕೇವಲ 10 ಪಂದ್ಯಗಳನ್ನು ಗೆದ್ದರೆ, ಕಿವೀಸ್ 30 ಪಂದ್ಯಗಳಲ್ಲಿ ಗೆಲುವು ಕಂಡಿದೆ.
ಪಿಚ್ ರಿಪೋರ್ಟ್
ಚೆನ್ನೈಯ ಐಕಾನಿಕ್ ಎಂ.ಎ ಚಿದಂಬರಂ ಸ್ಟೇಡಿಯಂನ ಪಿಚ್ ಸಂಪೂರ್ಣ ಸ್ಪಿನ್ ಪಿಚ್ ಆಗಿದೆ. ಸ್ಪಿನ್ನರ್‌ಗಳು ಆಟದ ಉದ್ದಕ್ಕೂ ಯೋಗ್ಯವಾದ ತಿರುವು ಪಡೆಯಲಿದ್ದಾರೆ. ಇಲ್ಲಿನ ಮೊದಲ ಇನಿಂಗ್ಸ್ನ ಎವರೇಜ್ ರನ್ 247. ಇದಕ್ಕೆ ಕಳೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವೇ ಸಾಕ್ಷಿ. ಇಲ್ಲಿ ಭಾರತೀಯ ಸ್ಪಿನ್ನರ್‌ಗಳು ಅತ್ಯಧಿಕ ವಿಕೆಟ್ ಪಡೆದಿದ್ದರು. ಅಲ್ಲದೆ ದಾಖಲಾಗಿದ್ದು 200 ರನ್ ಮಾತ್ರ. ಹೀಗಾಗಿ ಈ ಪಂದ್ಯವೂ ಸಣ್ಣ ಮೊತ್ತದ ಮೇಲಾಟವಾಗುವ ಸಾಧ್ಯತೆ ಇದೆ.
ಹವಾಮಾನ ವರದಿ
ಪಂದ್ಯ ನಡೆಯುವ ಶುಕ್ರವಾರ ಮಧ್ಯಾಹ್ನದ ತಾಪಮಾನವು ಸುಮಾರು 33 ಡಿಗ್ರಿಗಳಷ್ಟು ಇರುತ್ತದೆ. ಆ ಬಳಿಕ ಸ್ವಲ್ಪ ಮೋಡ ಕವಿದ ವಾತಾವರಣ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿಲಿನ ತಾಪ ಮಾತ್ರ ಅಧಿಕವಾಗಿಯೇ ಇರಲಿದ್ದು ಮಳೆಯ ಯಾವುದೇ ಸಾಧ್ಯತೆ ಇಲ್ಲ ಆದರೆ, ಇಬ್ಬನಿ ಸಮಸ್ಯೆ ಖಚಿತ ಎಂದು ತಿಳಿಸಿದೆ.
ವಿಲಿಯಮ್ಸನ್ ಆಗಮನ
ಐಪಿಎಲ್ ವೇಳೆ ಫೀಲ್ಡಿಂಗ್ ನಡೆಸುವಾಗ ಕಾಲಿಗೆ ಗಾಯ ಮಾಡಿಕೊಂಡು ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನ್ಯೂಜಿಲ್ಯಾಂಡ್ನ ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮೊದಲೆರಡು ಪಂದ್ಯಗಳಿಂದ ಅವರು ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಟ್ಯಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಿದ್ದರು. ಈಗಾಗಲೇ ಆಡಿದ ಎರಡೂ ಪಂದ್ಯ ಗೆದ್ದಿರುವ ಕಿವೀಸ್ಗೆ, ವಿಲಿಯಮ್ಸನ್ ಕಮ್ಬ್ಯಾಕ್ ಮತ್ತಷ್ಟು ಬಲ ನೀಡಿದಂತಾಗಿದೆ.
ಕಿವೀಸ್ ಬಲಿಷ್ಠ
ಅತ್ಯಂತ ಕೂಲ್ ಆಗಿ ಕ್ರಿಕೆಟ್ ಆಡುವ ನ್ಯೂಜಿಲ್ಯಾಂಡ್ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಮೂರು ವಿಭಾಗದಲ್ಲಿಯೂ ಅತ್ಯಂತ ಬಲಿಷ್ಠವಾಗಿದೆ. ಇಲ್ಲಿ ಗೆಲುವಿಗೆ ನಿರ್ದಿಷ್ಟ ಆಟಗಾರನ ಪ್ರದರ್ಶನವನ್ನು ನಂಬಿ ಕೂರಬೇಕಿಲ್ಲ. ಆಡುವ 11 ಮಂದಿಯೂ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಂಡಕ್ಕೆ ನೆರವಾಗಬಲ್ಲರು. ಇದು ತಂಡದ ಪ್ಲಸ್ ಪಾಯಿಂಟ್. ಆರಂಭಿಕ ಆಟಗಾರ ಡೆವೋನ್ ಕಾನ್ವೆ, ರಚೀನ್ ರವೀಂದ್ರ, ವಿಲ್ ಯಂಗ್, ಟಾಮ್ ಲ್ಯಾಥಮ್, ಡೇರಿಯಲ್ ಮಿಚೆಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಬೌಲಿಂಗ್ನಲ್ಲಿ ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್ ಮತ್ತು ಲಾಕಿ ಫರ್ಗ್ಯುಸನ್ ಇವರೆಲ್ಲ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಬೇಕಿದ್ದರೆ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ನೆರವಾಗಬಲ್ಲರು.\
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಮೋದಿ,ಸುನಕ್
ಬಾಂಗ್ಲಾಗೆ ಬೌಲಿಂಗ್ ಬಲ
ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ಗಿಂತ ಬೌಲಿಂಗ್ ಹೆಚ್ಚಿನ ಬಲವಾಗಿದೆ. ಅದರಲ್ಲೂ ಸ್ಪಿನ್ನರ್ಗಳನ್ನೇ ನೆಚ್ಚಿಕೊಂಡಿರುವ ತಂಡಕ್ಕೆ ಸ್ಪಿನ್ ಪಿಚ್ನಲ್ಲಿ ಹಿಡಿತ ಸಾಧಿಸುವ ಸುವರ್ಣ ಅವಕಾಶವಿದೆ. ಮೆಹದಿ ಹಸನ್, ನಾಯಕ ಶಕೀಬ್ ಅಲ್ ಹಸನ್ ಸ್ಪಿನ್ ಮೋಡಿ ಮಾಡಿದರೆ ಕಿವೀಸ್ಗೆ ಸೋಲು ಖಚಿತ ಎನ್ನಬಹುದು. ಬ್ಯಾಟಿಂಗ್ನಲ್ಲಿ ಬಾಂಗ್ಲಾ ಅಷ್ಟಾಗಿ ಬಲಿಷ್ಠವಾಗಿಲ್ಲ. ನಿಂತು ದೊಡ್ಡ ಇನಿಂಗ್ಸ್ ಕಟ್ಟ ಬಲ್ಲ ಆಟಗಾರರು ಕಾಣಿಸುತ್ತಿಲ್ಲ. ಏನಿದ್ದರೂ ಬೌಲಿಂಗ್ ಪ್ರದರ್ಶನದ ಮೂಲಕವೇ ಬಾಂಗ್ಲಾ ಗೆಲ್ಲಬೇಕು.
ಸಂಭಾವ್ಯ ತಂಡ
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ಕುಮರ್ ದಾಸ್, ತಂಝೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ಮಹೇದಿ ಹಸನ್, ಮುಶ್ಫಿಕರ್ ರಹೀಮ್, ತೌಹಿದ್ ಹೃದೋಯ್, ಮಹ್ಮುದುಲ್ಲಾ ರಿಯಾದ್, ತಸ್ಕಿನ್ ಹ್ಮದ್, ಶೋರಿಫುಲ್ ಇಸ್ಲಾಂ,ಮುಸ್ತಾಫಿಜುರ್ ರೆಹಮಾನ್.
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.