ಶಾರ್ಜಾ : ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿರುವ ಅಫಘಾನಿಸ್ತಾನ ತಂಡ ಮಂಗಳವಾರ ನಡೆಯಲಿರುವ ಏಷ್ಯಾ ಕಪ್ನ (Asia Cup) ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಎದುರಾಗಲಿದೆ. ಈ ಮೂಲಕ ಗೆಲುವಿನ ಅಭಿಯಾನವನ್ನು ಮುಂದುವರಿಸಿ ಸೂಪರ್ 4 ಹಂತಕ್ಕೆ ತೇರ್ಗಡೆಯಾಗುವ ಉದ್ದೇಶವನ್ನು ಹೊಂದಿದೆ. ಅತ್ತ ಕಡೆ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡ ಏಷ್ಯಾ ಕಪ್ನಲ್ಲಿ ಗೆಲುವಿನ ಶುಭಾರಂಭ ಮಾಡುವ ಉದ್ದೇಶವನ್ನು ಹೊಂದಿದೆ.
ಅಘಘಾನಿಸ್ತಾನ ತಂಡ ಟಿ20 ಮಾದರಿಯಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಎಂಥದ್ದೇ ತಂಡಕ್ಕೂ ಸವಾಲೆಸೆಯುತ್ತಿದೆ. ಅದರೆ, ಬಾಂಗ್ಲಾದೇಶ ತಂಡ ಇತ್ತೀಚಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಕಳೆದ ವರ್ಷ ನಡೆದ ಟಿ20 ವಿಶ್ವ ಕಪ್ನ 13 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನು ಜಯಿಸಿತ್ತು. ಅಂತೆಯೇ ತಿಂಗಳ ಹಿಂದೆ ನಡೆದ ಜಿಂಬಾಬ್ವೆ ಪ್ರವಾಸದಲ್ಲಿನ ಏಕದಿನ ಸರಣಿಯನ್ನೂ ಸೋತಿತ್ತು. ಹೀಗಾಗಿ ತಂಡ ದುರ್ಬಲವಾಗಿರುವಂತೆ ತೋರುತ್ತಿದೆ. ಹೀಗಾಗಿ ಇಂದಿನ ಪಂದ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ.
ಮಾರಕ ಬೌಲಿಂಗ್
ಶ್ರೀಲಂಕಾ ತಂಡದ ವಿರುದ್ಧ ಅಫಘಾನಿಸ್ತಾನದ ತಂಡದ ಬೌಲರ್ಗಳು ಪ್ರಭಾವಿ ಪ್ರದರ್ಶನ ನೀಡಿದ್ದರು. ಫಜಲ್ ಹಕ್ ಫರೂಕಿ ಮತ್ತು ನವೀನ್ ಹಕ್ ಅವರು ಲಂಕಾ ಬಳಗದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಒಂದು ವೇಳೆ ಅವರು ಮತ್ತೆ ಮಿಂಚಿದರೆ ಬಾಂಗ್ಲಾದೇಶ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದೇವೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೂರ್ನಿಯ ಮುಂದಿನ ಪಂದ್ಯಕ್ಕೆ ವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿಯಿದೆ ಎಂದು ಬಾಂಗ್ಲಾದೇಶ ತಂಡ ಆಲ್ರೌಂಡರ್ ಮೆಹೆದಿ ಹಸನ್ ಹೇಳಿದ್ದಾರೆ.
ತಂಡಗಳು
ಬಾಂಗ್ಲಾದೇಶ
ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಮೊಸದೆಕ್ಹೊಸೈನ್, ಮಹಮ್ಮದುಲ್ಲಾ, ಮಹೆದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಾಫಿಜುರ್ರೆಹಮಾನ್, ನಸುಮ್ ಅಹ್ಮದ್, ಸಬ್ಬೀರ್ ರಹಮಾನ್, ಮೆಹೆದಿ ಹಸನ್ ಮಿರಾಜ್, ಎಬಾದತ್ ಹೊಸೈನ್, ಪರ್ವೇಜ್ ಹೊಸೈನ್, ನೂರುಲ್ ಹಸನ್ ಸೋಹನ್, ಟಸ್ಕಿನ್ ಅಹ್ಮದ್.
ಅಫ್ಘಾನಿಸ್ತಾನ: ಹಜರತುಲ್ಲಾ ಝಝೈ, ರಹಮಾನುಲ್ಲಾ ಗುರ್ಬಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಜದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ, ನವೀನ್–ಉಲ್–ಹಕ್, ಮುಜೀಬ್ ಉರ್ ರಹಮಾನ್, ಫಜಲ್ ಹಕ್ ಫಾರೂಕಿ.
ಇದನ್ನೂ ಓದಿ | IND vs PAK | ಭಾರತ ತಂಡದ ಗೆಲುವಿಗೆ ಕುಹಕವಾಡಿದ ಪಾಕ್ ಪತ್ರಕರ್ತನ ಚಳಿ ಬಿಡಿಸಿದ ಅಭಿಮಾನಿಗಳು