Site icon Vistara News

AUS vs NED: ದುಬಾರಿ ಮೊತ್ತ ನೀಡಿ ಅನಗತ್ಯ ದಾಖಲೆ ಬರೆದ ಬಾಸ್ ಡಿ ಲೀಡೆ

Bas de Leede

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್(AUS vs NED)​ ತಂಡದ ಆಟಗಾರ ಬಾಸ್ ಡಿ ಲೀಡೆ(bas de leede) ಅವರು ತಮ್ಮ 10 ಓವರ್‌ಗಳಲ್ಲಿ 115 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲಿಂಗ್ ನಡೆಸಿದ ಕೆಟ್ಟ ದಾಖಲೆಯನ್ನು ಬರೆದಿದ್ದಾರೆ.

2006ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಕ್ ಲೆವಿಸ್ ಅವರು 10 ಓವರ್​ಗೆ 113 ರನ್​ ಮತ್ತು ಇದೇ ವರ್ಷ(2023) ಸೆಂಚುರಿಯನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸೀಸ್​ನ ಆ್ಯಂಡ ಜಂಪಾ ಅವರು 113 ರನ್​ ನೀಡಿದ್ದು ಇದುವರೆಗಿನ ಅತ್ಯಂತ ದುಬಾರಿ ರನ್​ ನೀಡಿದ ದಾಖಲೆಯಾಗಿತ್ತು. ಆದರೆ ಇದೀಗ ಬಾಸ್ ಡಿ ಲೀಡೆ 115ರನ್​ ಬಿಟ್ಟು ಈ ದಾಖಲೆಯನ್ನು ಮುರಿದು ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಆದರೆ 2 ವಿಕೆಟ್​ ಪಡೆದರು.

ಪಾಕಿಸ್ತಾನದ ವೇಗಿ ವಹಾಬ್​ ರಿಯಾಜ್​ ಅವರು ಈ ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 2016ರಲ್ಲಿ 10 ಓವರ್ ಎಸೆದು 110 ರನ್​ ಬಿಟ್ಟುಕೊಟ್ಟಿದ್ದರು. 5ನೇ ಸ್ಥಾನದಲ್ಲಿ ಅಫಘಾನಿಸ್ತಾನದ ರಶೀದ್​ ಖಾನ್ ಕಾಣಿಸಿಕೊಂಡಿದ್ದಾರೆ. ಅವರು 9 ಓವರ್​ ಬೌಲಿಂಗ್​ ನಡೆಸಿ 110 ರನ್​ ಬಿಟ್ಟುಕೊಟ್ಟಿದ್ದಾರೆ. ಒಂದೊಮ್ಮೆ 10 ಓವರ್ ಎಸೆದಿದ್ದರೆ ಇನ್ನೂ ಹೆಚ್ಚಿನ ರನ್​ ಬಿಟ್ಟುಕೊಡುತ್ತಿದ್ದರು.

​​ತಂದೆಯ ದಾಖಲೆ ಸರಿಗಟ್ಟಿದ್ದ ಬಾಸ್ ಡಿ ಲೀಡೆ

ಪಾಕಿಸ್ತಾನ ವಿರುದ್ಧ ಅಕ್ಟೋಬರ್​ 6 ರಂದು ಹೈದರಾಬಾದ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಸ್ ಡಿ ಲೀಡೆ ಅವರು ನಾಲ್ಕು ವಿಕೆಟ್​ ಕಿತ್ತು ತಮ್ಮ ತಂದೆ ಟಿಮ್​ ಡಿ ಲೀಡೆ ಅವರ ದಾಖಲೆಯನ್ನು ಸರಿಗಟ್ಟಿದ ಸಾಧನೆ ಮಾಡಿದ್ದರು. ಈ ಮೂಲಕ ವಿಶ್ವಕಪ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎನಿಸಿಕೊಂಡಿದ್ದರು.

ಇದನ್ನೂ ಓದಿ David Warner: ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ದಾಖಲೆ ಸರಿಗಟ್ಟಿದ ಡೇವಿಡ್​ ವಾರ್ನರ್​

ಬಾಸ್ ಡಿ ಲೀಡೆ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 9 ಓವರ್ ಎಸೆದು ಕೇವಲ 62 ರನ್​ ವೆಚ್ಚದಲ್ಲಿ 4 ವಿಕೆಟ್​ ಪಡೆದಿದ್ದರು. ಈ ಮೂಲಕ ಇನಿಂಗ್ಸ್​ ಒಂದರಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನೆದರ್ಲೆಂಡ್ಸ್‌ನ ನಾಲ್ಕನೇ ಬೌಲರ್​ ಎನಿಸಿಕೊಳ್ಳುವ ಮೂಲಕ ತಮ್ಮ ತಂದೆ ಟಿಮ್​ ಡಿ ಲೀಡೆ(Tim de Leede) ಅವರು 2003ರ ವಿಶ್ವಕಪ್​ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು.

ಇದನ್ನೂ ಓದಿ AUS vs NED: ನೆದರ್ಲೆಂಡ್ಸ್​ ವಿರುದ್ಧ ದಾಖಲೆಯ ಮೊತ್ತದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ

2003 ಏಕದಿನ ವಿಶ್ವಕಪ್‌ನಲ್ಲಿ ಟಿಮ್​ ಡಿ ಲೀಡೆ ಅವರು ಭಾರತದ ವಿರುದ್ಧ 35 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಿತ್ತಿದ್ದರು. ಭಾರತದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರ ವಿಕೆಟ್​ ಕಿತ್ತು ಈ ಸಾಧನೆ ಮಾಡಿದ್ದರು.

ದಾಖಲೆಯ ಮೊತ್ತದಿಂದ ಗೆದ್ದ ಆಸ್ಟ್ರೇಲಿಯಾ

ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ, ಆರಂಭಕಾರ ಡೇವಿಡ್​ ವಾರ್ನರ್(104)​ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್(106)​ ಅವರ ದಾಖಲೆಯ ಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 399 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಕಂಡು ಕಂಗಾಲಾದ ನೆದರ್ಲೆಂಡ್ಸ್​ 21 ಓವರ್​ಗಳಲ್ಲಿ 90 ರನ್​ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 309 ರನ್​ಗಳ ಗೆಲುವು ಸಾಧಿಸಿತು.

ಇದು ಏಕದಿನ ಕ್ರಿಕೆಟ್​ನಲ್ಲಿ ತಂಡವೊಂದರ ವಿರುದ್ಧ ಗೆದ್ದ ಎರಡನೇ ಅತ್ಯಧಿಕ ರನ್​ ಗೆಲುವಾಗಿದೆ. ದಾಖಲೆ ಭಾರತದ ಹೆಸರಿನಲ್ಲಿದೆ. ಇದೇ ವರ್ಷ ತಿರುವನಂತಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್​ ಇಂಡಿಯಾ ಲಂಕಾ ವಿರುದ್ಧ 317ರನ್​ಗಳ ಅಂತರದಿಂದ ಗೆದ್ದು ಬೀಗಿತ್ತು. ಆದರೆ ವಿಶ್ವಕಪ್​ನಲ್ಲಿ ಆಸೀಸ್​ ತಂಡದ ದಾಖಲೆಯ ಮೊತ್ತದ ಗೆಲುವುವಾಗಿದೆ.

Exit mobile version