ಢಾಕಾ : ಬಾಂಗ್ಲಾದೇಶದ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಅವರ ವಿರುದ್ಧ ಬೆಟ್ಟಿಂಗ್ ಸಂಸ್ಥೆಯೊಂದಕ್ಕೆ ಬೆಂಬಲ ಸೂಚಿಸಿದ ಆರೋಪ ಬಂದಿದ್ದು, ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪರಿಶೀಲಿಸಲೂ ತನಿಖಾ ಸಮಿತಿ ಮುಂದಾಗಿದೆ.
ಶಕಿಬ್ ಅಲ್ ಹಸನ್ ಅವರು ಇತ್ತೀಚೆಗೆ ಬೆಟ್‌ವಿನ್ನರ್ ನ್ಯೂಸ್ ಎಂಬ ಬೆಟ್ಟಿಂಗ್ ಕಂಪನಿಯನ್ನು ಬೆಂಬಲಿಸುವಂಥ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದರು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬೆಟ್ಟಿಂಗ್ ವಿಚಾರದಲ್ಲಿ ಕನಿಷ್ಠ ಸಹಿಷ್ಣುತೆಯನ್ನು ಹೊಂದಿರುವ ಕಾರಣ ಅವರ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ.
ಶಕಿಬ್ ಅಲ್ ಹಸನ್ ಅವರು ೨೦೧೯ರಲ್ಲಿ ಮೋಸದಾಟಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಎಸಗಿದ್ದ ಕಾರಣ ಶಿಕ್ಷೆ ಎದುರಿಸಿದ್ದರು. ಇದು ಕೂಡ ಅದೇ ಮಾದರಿಯ ತಪ್ಪು ಆಗಿರಬಹುದೇ ಎಂಬ ಮಾಹಿತಿ ಇಲ್ಲ. ಆದರೆ, ಅವರು ಗೊತ್ತಿದ್ದು ಬೆಟ್ಟಿಂಗ್ ಕಂಪನಿಗೆ ಬೆಂಬಲ ಕೊಟ್ಟಿದ್ದು ಹೌದಾದರೆ ಶಿಕ್ಷೆಗೆ ಒಳಪಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಮಾಹಿತಿ ನೀಡಿ “ಬೆಟ್ಟಿಂಗ್ ಕಂಪನಿ ಪರವಾಗಿ ಕೆಲಸ ಮಾಡಲು ಯಾವುದೇ ರೀತಿಯ ಅನುಮತಿ ಪಡೆದುಕೊಂಡಿಲ್ಲ. ಒಂದು ವೇಳೆ ಅವರು ಯಾವುದಾದರೂ ಒಪ್ಪಂದ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಕಠಿಣ ನಿಯಮಗಳಿಗೆ ಒಳಪಡಲಿದ್ದಾರೆ,” ಎಂದು ಅವರು ಹೇಳಿದ್ದಾರೆ.
“ಮೊದಲಾಗಿ ಶಕಿಬ್ ಅವರು ಬೆಟ್ಟಿಂಗ್ ಸಂಸ್ಥೆಯೊಂದಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ. ನೀಡಿದ್ದರೆ ಅದಕ್ಕೆ ಅನುಮತಿಯೂ ಸಿಕ್ಕಿರುವುದಿಲ್ಲ. ಯಾಕೆಂದರೆ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಅಂಥದ್ದಕ್ಕೆ ಅನುಮತಿ ನೀಡುವುದಿಲ್ಲ. ಹೀಗಾಗಿ ಅವರಿಗೆ ನೋಟಿಸ್ ನೀಡಿ ಕಾರಣ ಕೇಳಲಾಗಿದೆ. ಅವರು ಒಪ್ಪಂದಕ್ಕೆ ಸಹಿ ಹಾಕಿರುವುದು ಸತ್ಯವೇ ಎಂಬುದನ್ನು ಪರಾಮರ್ಶಿಸುವ ಕೆಲಸ ನಡೆಯುತ್ತಿದೆ,” ಎಂದು ಅವರು ಇದೇ ವೇಳೆ ಹೇಳಿದರು.