ನವದೆಹಲಿ: ಟಿ20 ವಿಶ್ವ ಕಪ್ ಮತ್ತು ಏಷ್ಯಾಕಪ್ನಲ್ಲಿ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದ ಕಾರಣ ತಲೆದಂಡವಾಗಿ ಬಿಸಿಸಿಐ(BCCI ) ಚೇತನ್ ಶರ್ಮಾ ಸಾರಥ್ಯದ ಪೂರ್ಣ ಆಯ್ಕೆ ಮಂಡಳಿಯನ್ನೇ ವಜಾಗೊಳಿಸಿತ್ತು. ಅಲ್ಲದೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಿಸುವ ಸಲುವಾಗಿ ಅರ್ಜಿ ಕೂಡ ಅಹ್ವಾನಿಸಿತ್ತು. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಬಿಸಿಸಿಐ ಒಟ್ಟು 207 ಮಂದಿಯ ಅರ್ಜಿ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.
ಸದ್ಯ ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಘಟಾನುಘಟಿ ಮಾಜಿ ಆಟಗಾರರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕನ್ನಡಿಗ ಹಾಗೂ ಟೀಮ್ ಇಂಡಿಯಾ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಅನುಭವಿ ವೆಂಕಟೇಶ್ ಪ್ರಸಾದ್
ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ವೆಂಕಟೇಶ್ ಪ್ರಸಾದ್ ಅತ್ಯಂತ ಅನುಭವಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರು ಪ್ರಸ್ತುತ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಈಗಾಗಲೇ ಐಪಿಎಲ್ ಟೂರ್ನಿಗಳಲ್ಲಿ ಹಲವು ತಂಡದ ಪರ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಒಂದೊಮ್ಮೆ ಅವರು ಆಯ್ಕೆಯಾದರೆ ಬಿಸಿಸಿಐನಲ್ಲಿ ಕನ್ನಡಿಗರ ಪಾರುಪತ್ಯ ಆರಂಭವಾದಂತಾಗುತ್ತದೆ. ಏಕೆಂದರೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕೂಡ ಕನ್ನಡಿಗರಾಗಿದ್ದಾರೆ.
ಒಂದು ವೇಳೆ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಆಯ್ಕೆಯಾದರೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಆಗುವುದು ನಿಶ್ಚಿತ. ಏಕೆಂದರೆ ಬಾಂಗ್ಲಾ ವಿರುದ್ಧದ ಏಕದಿನ ಸೋಲಿನ ಬಳಿಕ ಟೀಮ್ ಇಂಡಿಯಾದ ಕಳಪೆ ಆಟಕ್ಕೆ ವೆಂಕಟೇಶ್ ಪ್ರಸಾದ್ ಕೋಚ್ ಮತ್ತು ನಾಯಕನ ವಿರುದ್ಧ ನೇರವಾಗಿ ಕಿಡಿ ಕಾರಿದ್ದರು.
ಈಗಾಗಲೇ ಬಿಸಿಸಿಐ ತನ್ನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕವನ್ನು ಮಾಡಿದೆ. ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಹಾಗೂ ಮಾಜಿ ಮಹಿಳಾ ಆಟಗಾರ್ತಿ ಸುಲಕ್ಷಣ ನಾಯಕ್ ಅವರನ್ನು ನೂತನ ಸದಸ್ಯರನ್ನಾಗಿ ಆಯ್ಕೆಮಾಡಿದೆ. ಈಗ ಈ ಮೂವರ ಸಲಹಾ ಸಮಿತಿ ಬಿಸಿಸಿಐನ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಕ ಮಾಡುವ ಕೆಲಸ ಮಾಡಲಿದೆ.
ಇದನ್ನೂ ಓದಿ | BCCI MEETING | ಬಾಂಗ್ಲಾ ವಿರುದ್ಧದ ಸರಣಿ ಸೋಲಿನ ಬಳಿಕ ದಿಢೀರ್ ಸಭೆ ನಡೆಸಲು ಮುಂದಾದ ಬಿಸಿಸಿಐ