ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ ಸೋಲಿನ ಬಳಿಕ ಬಿಸಿಸಿಐ(BCCI ) ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆಯನ್ನು ಮಾಡಿತ್ತು. ಮೊದಲ ಹಂತದಲ್ಲಿ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಇದೀಗ ಟಿ20 ತಂಡಕ್ಕೆ ನೂತನ ಕೋಚ್ ನೇಮಕ ಮಾಡುವ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಟೀಮ್ ಇಂಡಿಯಾದ ಮುಖ್ಯಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರನ್ನು ಟಿ20 ತಂಡದಿಂದ ಕೆಳಗಿಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ. ಆದರೆ ಏಕ ದಿನ ಮತ್ತು ಟೆಸ್ಟ್ ತಂಡದ ಕೋಚ್ ಆಗಿ ದ್ರಾವಿಡ್ ಅವರನ್ನೇ ಮುಂದುವರಿಸುವುದಾಗಿ ತಿಳಿದು ಬಂದಿದೆ.
ಸದ್ಯದ ಮಾಹಿತಿ ಪ್ರಕಾರ ಟಿ20 ಮಾದರಿಗೆ ಬಿಸಿಸಿಐ ವಿದೇಶಿ ಕೋಚ್ ಹುಡುಕಾಟದಲ್ಲಿ ತೊಡಗಿದ್ದು ಈ ಬಗ್ಗೆ ಕ್ರಿಕೆಟ್ ಸಲಹಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಲು ಮುಂದಾಗಿದೆ. ಈ ಚರ್ಚೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಆಯ್ಕೆಯಾದ ನಂತರ ಭಾರತ ತಂಡ ಹೇಳಿಕೊಳ್ಳುವಷ್ಟು ಉತ್ತಮ ಪ್ರದರ್ಶನ ತೋರಿಲ್ಲ. ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಏಷ್ಯಾಕಪ್ ಹಾಗೂ ಟಿ20 ವಿಶ್ವ ಕಪ್ ಪಂದ್ಯಗಳಲ್ಲಿ ಭಾರತ ಮುಗ್ಗರಿಸಿದ ಬೆನ್ನಲ್ಲೇ ದ್ರಾವಿಡ್ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ಮಾತ್ರವಲ್ಲ, ದ್ರಾವಿಡ್ ಪದೆ ಪದೇ ವಿಶ್ರಾಂತಿ ಪಡೆಯುತ್ತಿರುವ ಬಗ್ಗೆಯೂ ಪ್ರಶ್ನೆಗಳು ಇವೆ. ಇದೀಗ ಅವರನ್ನು ಟಿ20 ಕೋಚ್ ಹುದ್ದೆಯಿಂದ ಕೆಳಗಿಳಿಸಲು ಚಿಂತನೆ ನಡೆದಿದೆ.
ಒಂದೊಮ್ಮೆ ಬಿಸಿಸಿಐ ವಿದೇಶಿ ಕೋಚ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಾದರೆ ಈ ರೇಸ್ನಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಶ್ರೀಲಂಕಾದ ಮಹೇಲಾ ಜಯವರ್ಧನೆ ಹೆಸರು ಮುಂಚೂಣಿಯುಲ್ಲಿದೆ.
ಇದನ್ನೂ ಓದಿ | IND VS PAK: ಭಾರತ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್ ಕದನಕ್ಕೆ ವೇದಿಕೆ ಒದಗಿಸಲು ಮುಂದಾದ ಎಂಸಿಸಿ!