ನವದೆಹಲಿ: 2023-24ರ ದೇಶಿ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ(BCCI) ಪ್ರಕಟಿಸಿದೆ. ದುಲೀಪ್ ಟ್ರೋಫಿ ಟೂರ್ಗೆನಿಯೊಂದಿಗೆ ಜೂನ್ 28ರಂದು ಮೊದಲ್ಗೊಳ್ಳಲಿದೆ. 2019-20ರ ಬಳಿಕ ಇದೇ ಮೊದಲ ಬಾರಿ ದೇವಧರ್ ಟ್ರೋಫಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಪ್ರತಿಷ್ಠಿತ ರಣಜಿ ಟ್ರೋಫಿ(ranji trophy) ಕ್ರಿಕೆಟ್ ಪಂದ್ಯಾವಳಿಗಾಗಿ ಮುಂದಿನ ವರ್ಷದ ತನಕ ಕಾಯಬೇಕಿದೆ. ರಣಜಿ ಟ್ರೋಫಿ ಜನವರಿ 5ರಿಂದ ಪ್ರಾರಂಭವಾಗಲಿದೆ.
6 ವಲಯಗಳ ತಂಡಗಳು ಪಾಲ್ಗೊಳ್ಳುವ ದುಲೀಪ್ ಟ್ರೋಫಿ ಜೂನ್ 28ರಂದು ಆರಂಭಗೊಂಡು ಜುಲೈ 16ರ ವರೆಗೆ ಸಾಗಲಿದೆ. ಇದಾದ ಬಳಿಕ ದೇವಧರ್ ಟ್ರೋಫಿ ಕ್ರಿಕೆಟ್ (ಜುಲೈ 24-ಆಗಸ್ಟ್ 3). ಇರಾನಿ ಕಪ್ (ಅಕ್ಟೋಬರ್ 1-15), ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (ಅಕ್ಟೋಬರ್ 16.-ನವೆಂಬರ್ 6) ಮತ್ತು ವಿಜಯ್ ಹಜಾರೆ ಟ್ರೋಫಿ (ನವೆಂಬರ್ 23-ಡಿಸೆಂಬರ್ 15) ಪಂದ್ಯಾವಳಿಯನ್ನು ಆಡಲಾಗುವುದು.
ರಣಜಿ ಟ್ರೋಫಿ ಈ ಮೊದಲಿನಂತೆ ಎಲೈಟ್ ಹಾಗೂ ಪ್ಲೇಟ್ ಗ್ರೂಪ್ ಮಾದರಿಯಲ್ಲಿ ನಡೆಯಲಿದೆ. ಎಲೈಟ್ ಲೀಗ್ ಪಂದ್ಯಗಳು ಜನವರಿ 5ರಿಂದ ಫೆಬ್ರವರಿ 19ರ ತನಕ ನಡೆಯಲಿದೆ. ನಾಕೌಟ್ ಪಂದ್ಯಗಳು ಫೆಬ್ರವರಿ 23ರಿಂದ ಮಾರ್ಚ್ 14ರ ತನಕ ಸಾಗಲಿವೆ. 4 ಎಲೈಟ್ ಗ್ರೂಪ್‌ಗಳಲ್ಲಿ ತಲಾ 8 ತಂಡಗಳು ಹಾಗೂ ಏಕೈಕ ಪ್ಲೇಟ್ ಗ್ರೂಪ್‌ನಲ್ಲಿ 6 ತಂಡಗಳಿವೆ.
ಮಹಿಳೆಯರ ಟಿ20 ಚಾಂಪಿಯನ್ಶಿಪ್ ಅಕ್ಟೋಬರ್ 19ರಿಂದ ನವೆಂಬರ್ 9, ಅಂತರ್ ವಲಯ ಟಿ20 ನವೆಂಬರ್ 24ರಿಂದ ಡಿಸೆಂಬರ್ 4, ರಾಷ್ಟ್ರೀಯ ಮಹಿಳಾ ಏಕ ದಿನ 2024ರ ಜನವರಿ 4ರಿಂದ 26ರ ವರೆಗೆ ನಡೆಯಲಿದೆ.