ಮುಂಬಯಿ : ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಏಕ ದಿನ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಭಾರತ ತಂಡ ಒಟ್ಟು ಮೂರು ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಮೊದಲ ಪಂದ್ಯ ಸೆಪ್ಟೆಂಬರ್ ೨೫ರಂದು ನಡೆಯಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ ೨೫ ಹಾಗೂ ಮೂರನೇ ಹಾಗೂ ಕೊನೇ ಪಂದ್ಯ ಸೆಪ್ಟೆಂಬರ್ ೨೭ರಂದು ಆಯೋಜನೆಗೊಂಡಿದೆ.
ಸಂಜು ಸ್ಯಾಮ್ಸನ್ ಅವರು ಕಳೆದ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ತಂಡದ ನಾಯಕರಾಗಿದ್ದರು. ಟೂರ್ನಿಯಲ್ಲಿ ರಾಜಸ್ಥಾನ್ ತಂಡ ಫೈನಲ್‌ಗೇರಿತ್ತು. ಸಂಜು ಸ್ಯಾಮ್ಸನ್ ಒಟ್ಟಾರೆ ೧೭ ಪಂದ್ಯಗಳಲ್ಲಿ ೨೮.೬೩ ಸರಾಸರಿಯಂತೆ ಹಾಗೂ ೧೪೬.೭೯ ಸ್ಟ್ರೈಕ್ ರೇಟ್‌ನಂತೆ ೪೫೮ ರನ್ ಬಾರಿಸಿದ್ದರು. ಅದೇ ರೀತಿ ಪ್ರಸಕ್ತ ವರ್ಷ ೬ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, ೪೪. ೭೫ ಸರಾಸರಿಯಲ್ಲಿ ೧೭೯ ರನ್ ಬಾರಿಸಿದ್ದರು. ಐರ್ಲೆಂಡ್ ವಿರುದ್ಧ ಗರಿಷ್ಠ ೭೭ ರನ್ ಬಾರಿಸಿದ್ದರು.
ಸ್ಯಾಮ್ಸನ್ ಪರ ಅಭಿಯಾನ
ಟಿ೨೦ ವಿಶ್ವ ಕಪ್ ತಂಡ ಪ್ರಕಟಗೊಂಡಾಗ ಸಂಜು ಸ್ಯಾಮ್ಸನ್ ಪರ ಅಭಿಯಾನ ಆರಂಭಗೊಂಡಿತ್ತು. ಸತತವಾಗಿ ವೈಫಲ್ಯ ಕಾಣುತ್ತಿರುವ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಲಾಗಿತ್ತು. ಇದೀಗ ಎ ತಂಡದ ನಾಯಕತ್ವ ನೀಡಿ ಅಭಿಮಾನಿಗಳನ್ನು ಸಮಾಧಾನ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಭಾರತ ಎ ತಂಡ
ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟೀದಾರ್, ಸಂಜು ಸ್ಯಾಮ್ಸನ್, ಕೆ. ಎಸ್ ಭರತ್, ಕುಲ್ದೀಪ್ ಯಾದವ್, ಶಹಬಾಜ್ ಅಹಮದ್, ರಾಹುಲ್ ಚಾಹರ್, ತಿಲಕ್ ವರ್ಮ, ಕುಲ್ದೀಪ್ ಸೇನ್, ಶಾರ್ದುಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ರಾಜ್ ಅಂಗದ್ ಬಾವ.
ಇದನ್ನೂ ಓದಿ | Sanju should retire : ಇದು ಕೋಪದ ಮಾತಲ್ಲ, ಹತಾಶೆಯ ಅಭಿಯಾನ