Site icon Vistara News

Team India: ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದವರು ಯಾರೆಲ್ಲ?

Shreyanka Patil

#image_title

ಮುಂಬಯಿ: ಮುಂಬರುವ ಎಸಿಸಿ ಉದಯೋನ್ಮುಖ ಮಹಿಳಾ ಏಷ್ಯಾ ಕಪ್ 2023 ಗಾಗಿ ಭಾರತ ‘ಎ’ ತಂಡವನ್ನು (Team India: ) ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಇತ್ತೀಚೆಗೆ ಪ್ರಕಟಿಸಿದೆ. ಜೂನ್ 12ರಂದು ಹಾಂಕಾಂಗ್​ನಲ್ಲಿ ಈ ಟೂರ್ನಿ ಆರಂಭವಾಗಲಿದೆ. ಭಾರತ ‘ಎ’ ತಂಡ ಜೂನ್ 13ರಂದು ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್​ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಸೆಣಸಲಿದೆ.

ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಭಾರತ ‘ಎ’ ಗುಂಪಿನಲ್ಲಿ ಹಾಂಕಾಂಗ್, ಥೈಲ್ಯಾಂಡ್ ‘ಎ’ ಮತ್ತು ಪಾಕಿಸ್ತಾನ ‘ಎ’ ತಂಡಗಳು ಸ್ಥಾನ ಪಡೆದಿವೆ. ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ ‘ಎ’, ಶ್ರೀಲಂಕಾ ‘ಎ’, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇವೆ. ಟೂರ್ನಿಯ ಫೈನಲ್ ಪಂದ್ಯ ಜೂನ್ 21ರಂದು ನಡೆಯಲಿದೆ.

ಭಾರತ ‘ಎ’ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ಜೂನ್ 13ರಂದು ಹಾಂಕಾಂಗ್, ಜೂನ್ 15 ರಂದು ಥೈಲ್ಯಾಂಡ್ ‘ಎ’ ಮತ್ತು ಜೂನ್ 17 ರಂದು ಪಾಕಿಸ್ತಾನ ‘ಎ’ ತಂಡವನ್ನು ಎದುರಿಸಲಿದೆ. ಶ್ವೇತಾ ಸೆಹ್ರಾವತ್​ ಅವರನ್ನು ತಂಡದ ನಾಯಕಿಯಾಗಿ ಮತ್ತು ಸೌಮ್ಯ ತಿವಾರಿ ಅವರನ್ನು ಉಪನಾಯಕಿಯಾಗಿ ಬಿಸಿಸಿಐ ಹೆಸರಿಸಿದೆ. ವಿಶೇಷವೆಂದರೆ, ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನ ಉದ್ಘಾಟನಾ ಆವೃತ್ತಿಯಲ್ಲಿ ಸೆಹ್ರಾವತ್ ಯುಪಿ ವಾರಿಯರ್ಸ್ ಪರ ಆಡಿದ್ದರು. ತಂಡದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ ಮತ್ತು ಇತರ ಆಟಗಾರ್ತಿಯರು ಸೇರಿದ್ದಾರೆ. ಇದಲ್ಲದೆ, ತಂಡವು ಮುಖ್ಯ ಕೋಚ್ ನೂಶಿನ್ ಅಲ್ ಖದೀರ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಇದನ್ನೂ ಓದಿ : ಅಪ್ಪನಿಗೆ ಕೊಟ್ಟ ಮಾತು ತಪ್ಪಬಾರದು ಎಂದು ಈ ಒಂದು ಕೆಲಸ ಯಾವತ್ತೂ ಮಾಡಿಲ್ಲ ಸಚಿನ್​!

ತಂಡದ ಅನೇಕ ಆಟಗಾರ್ತಿಯರು ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2023ರ ಉದ್ಘಾಟನಾ ಋತುವಿನಲ್ಲಿ ಕಾಣಿಸಿಕೊಂಡು ಅದ್ಭುತ ಪ್ರದರ್ಶನಗಳನ್ನು ನೀಡಿದ್ದರು. ಸೆಹ್ರಾವತ್ ನಾಯಕತ್ವದಲ್ಲಿ ಭಾರತ ‘ಎ’ ತಂಡ ಉದಯೋನ್ಮುಖ ಮಹಿಳಾ ಏಷ್ಯಾಕಪ್​ನಲ್ಲಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಭಾರತ ‘ಎ’ ತಂಡ: ಶ್ವೇತಾ ಸೆಹ್ರಾವತ್ (ನಾಯಕಿ), ಸೌಮ್ಯ ತಿವಾರಿ (ಉಪನಾಯಕಿ), ತ್ರಿಷಾ ಗೊಂಗಾಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ತಿತಾಸ್ ಸಾಧು, ಯಶಸ್ವಿ ಎಸ್, ಕಾಶ್ವೀ ಗೌತಮ್, ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.

Exit mobile version