Site icon Vistara News

IND vs ENG: ಅಂತಿಮ ಟೆಸ್ಟ್​ಗೆ ಭಾರತ ತಂಡ ಪ್ರಕಟ; ರಾಹುಲ್​​ ಔಟ್​, ಬುಮ್ರಾ ಇನ್​

IND vs ENG

ಧರ್ಮಶಾಲಾ: ಇಂಗ್ಲೆಂಡ್(IND vs ENG)​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯಕ್ಕೆ ಬಿಸಿಸಿಐ ಗುರುವಾರ ಭಾರತ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ತೊಡೆಗಳ ಸ್ನಾಯು ಸೆಳೆತದಿಂದ ಬಳಲುತ್ತಿರುವ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಈ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. 4ನೇ ಟೆಸ್ಟ್​ಗೆ ವಿಶ್ರಾಂತಿ ಪಡೆದಿದ್ದ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಮತ್ತೆ ತಂಡ ಸೇರ್ಪಡೆಗೊಂಡಿದ್ದಾರೆ. ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್(Washington Sundar)​ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ.

ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಮಾರ್ಚ್ 2, 2024 ರಿಂದ ಮುಂಬೈ ವಿರುದ್ಧದ ರಣಜಿ ಟ್ರೋಫಿ ಸೆಮಿ-ಫೈನಲ್ ಪಂದ್ಯಕ್ಕಾಗಿ ಅವರು ತಮಿಳುನಾಡು ತಂಡದ ಭಾಗವಾಗಲಿದ್ದಾರೆ. ಒಂದೊಮ್ಮೆ ತಂಡಕ್ಕೆ ಅವರ ಅಗತ್ಯವಿದ್ದರೆ ದೇಶೀಯ ಪಂದ್ಯವನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಭಾರತ ತಂಡಕ್ಕೆ ಸೇರಿಕೊಳ್ಳಲಾಗುತ್ತದೆ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಧರ್ಮಶಾಲಾದಲ್ಲಿ ನಡೆಯುವ ಇಂಗ್ಲೆಂಡ್​ ಮತ್ತು ಭಾರತ ನಡುವಣ ಅಂತಿಮ ಟೆಸ್ಟ್ ಮಾರ್ಚ್​ 7ರಿಂದ ಆರಂಭಗೊಳ್ಳಲಿದೆ.

​ಮೊಹಮ್ಮದ್ ಶಮಿ ಅವರು ತಮ್ಮ ಬಲ ಹಿಮ್ಮಡಿ ಸಮಸ್ಯೆಗಾಗಿ ಈಗಾಗಲೇ ಲಂಡನ್​ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ತಮ್ಮ ಪುನರ್ವಸತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ ತಂಡದ ಅನುಭವಿ ಮತ್ತು ಹಿರಿಯ ಆಟಗಾರ ಆರ್​.ಅಶ್ವಿನ್​ಗೆ(R Ashwin) ಈ ಪಂದ್ಯ ವಿಶೇಷವಾಗಲಿದೆ. ಇದು ಅವರ 100ನೇ ಟೆಸ್ಟ್‌ ಪಂದ್ಯವಾಗಿದೆ. ಈ ಸಾಧನೆ ಮಾಡಿ 13ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ. ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಇದನ್ನೂ ಓದಿ Ind vs eng : ಪಾಕ್ ದಾಖಲೆಯನ್ನು ಅಳಿಸಿ ಹಾಕಿದ ಭಾರತ ಟೆಸ್ಟ್​ ತಂಡ

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ.

ಅಂತಿಮ ಟೆಸ್ಟ್​ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆ.ಎಸ್ ಭರತ್ (ವಿಕೆಟ್​ ಕೀಪರ್​), ದೇವದತ್ ಪಡಿಕ್ಕಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Exit mobile version