Site icon Vistara News

Team India: ಮಹಿಳೆಯರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಪ್ರಕಟ; ಕನ್ನಡಿಗರಿಗೂ ಸಿಕ್ಕಿತು ಸ್ಥಾನ

BCCI

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನ್ 19ರಂದು ಭಾರತ ಮಹಿಳೆಯರ ಕ್ರಿಕೆಟ್​ ತಂಡದ ಅಯ್ಕೆ ಸಮಿತಿ ಮತ್ತು ಕಿರಿಯರ ಕ್ರಿಕೆಟ್ ಸಮಿತಿಗಳನ್ನು ಪ್ರಕಟಿಸಿದೆ. ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕ್ರಮವಾಗಿ ಶ್ಯಾಮ್ ಡೇ ಶಾ ಮತ್ತು ವಿ.ಎಸ್. ತಿಲಕ್ ನಾಯ್ಡು ಅವರನ್ನು ಆಯ್ಕೆ ಮಾಡಿದೆ. ಇದು ಸಿಎಸಿಯ ಸರ್ವಾನುಮತದ ಆಯ್ಕೆಯಾಗಿದೆ.

ಎಡಗೈ ಬ್ಯಾಟ್ಸ್ಮನ್ ಮತ್ತು ಮಧ್ಯಮ ವೇಗದ ಬೌಲರ್ ಆಗಿದ್ದ ಶಾ ಮೂರು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಮೊದಲು 1985 ರಿಂದ 1992 ರವರೆಗೆ ದೇಶೀಯ ಕ್ರಿಕೆಟ್​​ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದರು. 1998 ರಿಂದ 2002ವರೆಗೆ ರೈಲ್ವೇಸ್ ತಂಡವನ್ನು ಪ್ರತಿನಿಧಿಸಿದರು. ಅವರ ವೃತ್ತಿಜೀವನದ ನಂತರ, ಅವರು ಎರಡು ಅವಧಿಗೆ ಬಂಗಾಳ ಕ್ರಿಕೆಟ್​ ತಂಡದ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ತಿಲಕ್​ ನಾಯ್ಡು ಕರ್ನಾಟಕ ತಂಡದ ಪರವಾಗಿ ಆಡಿದ ಆಟಗಾರ. 1998-99ರಿಂದ 2009-10ರ ಅವಧಿಯಲ್ಲಿ ಕರ್ನಾಟಕ ಹಾಗೂ ದುಲೀಪ್ ಟ್ರೋಫಿ ಹಾಗೂ ದೇವಧರ್ ಟ್ರೋಫಿಯಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದರು. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಗುರುತಿಸಿಕೊಂಡಿದ್ದರು. 93 ಪ್ರಥಮ ದರ್ಜೆ ಪಂದ್ಯಗಳಲ್ಲಿ 4386 ರನ್ ಗಳಿಸಿದ್ದಾರೆ. 2013 ರಿಂದ 2016 ರವರೆಗೆ ಅವರು ಕೆಎಸ್​ಸಿಎ ಜೂನಿಯರ್ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷರಾಗಿದ್ದರು. 2015-16 ರ ಋತುವಿನಲ್ಲಿ ಕೆಎಸ್ಸಿಎಯ ಹಿರಿಯ ಆಯ್ಕೆ ಸಮಿತಿಯಲ್ಲಿ ಸೇವೆ ಸಲ್ಲಿಸಿದರು.

ಮಹಿಳಾ ಆಯ್ಕೆ ಸಮಿತಿ: ನೀತು ಡೇವಿಡ್ (ಅಧ್ಯಕ್ಷೆ), ರೇಣು ಮಾರ್ಗರೇಟ್, ಆರತಿ ವೈದ್ಯ, ಕಲ್ಪನಾ ವೆಂಕಟಚಾ, ಶ್ಯಾಮಾ ಡೇ ಶಾ.

ಕಿರಿಯರ ಕ್ರಿಕೆಟ್ ಸಮಿತಿ: ವಿ.ಎಸ್.ತಿಲಕ್ ನಾಯ್ಡು (ಅಧ್ಯಕ್ಷರು), ರಣದೇಬ್ ಬೋಸ್, ಹರ್ವಿಂದರ್ ಸಿಂಗ್ ಸೋಧಿ, ಪಾಥಿಕ್ ಪಟೇಲ್, ಕೃಷ್ಣ ಮೋಹನ್.

Exit mobile version