Site icon Vistara News

BCCI ಅಧಿಕಾರವಧಿ ವಿಸ್ತರಣೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಮೇಲ್ಮನವಿ ಸಲ್ಲಿಕೆ

BCCI

ನವ ದೆಹಲಿ: ಸೌರವ್‌ ಗಂಗೂಲಿ ಸೇರಿ BCCI ಪದಾಧಿಕಾರಿಗಳ ಅಧಿಕಾರವಧಿ ವಿಸ್ತರಣೆ ಹಾಗೂ ಸಂವಿಧಾನ ಬದಲಾವಣೆಗೆ ಅನುಮತಿ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಚಾರಣೆಗೆ ಎತ್ತಿಕೊಳ್ಳುವಂತೆ ಬಿಸಿಸಿಐ ಸುಪ್ರೀಮ್‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ೨೦೧೯ರಲ್ಲಿ ಅಧಿಕಾರ ವಹಿಸಿಕೊಂಡಿದ್ದರೆ, ಅದೇ ವೇಳೆ ಜಯ್‌ ಶಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆದರೆ, ಅದಕ್ಕಿಂತ ಮೊದಲು ಗಂಗೂಲಿ ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಹಾಗೂ ಜಯ್‌ ಶಾ ಗುಜರಾತ್‌ ಅಸೋಸಿಯೇಷನ್‌ ಪದಾಧಿಕಾರಿಯಾಗಿ ಸತತ ಐದು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ನ್ಯಾಯಮೂರ್ತಿ ಲೋಧಾ ಸಮಿತಿ ಶಿಫಾರಸಿನಂತೆ ರಚನೆಯಾದ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ಆರು ವರ್ಷಕ್ಕಿಂತ ಅಧಿಕ ಕ್ರಿಕೆಟ್‌ ಸಮಿತಿಯೊಂದರಲ್ಲಿ ಕೆಲಸ ಮಾಡಿದರೆ ಮುಂದಿನ ಮೂರು ವರ್ಷ ಕೂಲಿಂಗ್‌ ಪಿರಿಯೆಡ್‌ ಮುಗಿಸಬೇಕು. ಹೀಗಾಗಿ ಗಂಗೂಲಿ ಅವಧಿ ೨೦೨೦ರಲ್ಲಿ ಮುಕ್ತಾಯಗೊಳ್ಳುತ್ತದೆ.

ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ನಡೆಯದ ಕಾರಣ ಗಂಗೂಲಿ ಅಧಿಕಾರವಧಿ ಒಂದು ವರ್ಷ ಮುಂದೂಡಿಕೆ ಮಾಡಲಾಗಿತ್ತು. ನಂತರವೂ ಒಂದು ವರ್ಷ ಮುಂದೂಡಿಕೆ ಮಾಡಲಾಗಿದ್ದು, ಮುಂದಿನ ಸೆಪ್ಟೆಂಬರ್‌ಗೆ ಅಧಿಕಾರದ ಅವಧಿ ಮುಗಿಯುತ್ತದೆ. ಹೀಗಾಗಿ ಕೂಲಿಂಗ್‌ ಪಿರಿಯೆಡ್‌ ಸೇರಿದಂತೆ ಹಲವು ಮನವಿಗಳನ್ನು ಮುಂದಿಟ್ಟುಕೊಂಡು ಮಾಡಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಂತೆ ಬಿಸಿಸಿಐ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಇದನ್ನೂ ಓದಿ | ರಾಜಕೀಯಕ್ಕೆ ಕಾಲಿಡ್ತಾರಾ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ?

Exit mobile version