ಮುಂಬಯಿ: ಟಿ20 ವಿಶ್ವ ಕಪ್ ಸೋಲಿನ ಬಳಿಕ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿದೆ.
ಬಿಸಿಸಿಐ ಗುರುವಾರ ತನ್ನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕವನ್ನು ಪ್ರಕಟಿಸಿದ್ದು, ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಹಾಗೂ ಮಾಜಿ ಮಹಿಳಾ ಆಟಗಾರ್ತಿ ಸುಲಕ್ಷಣ ನಾಯಕ್ ಅವರನ್ನು ನೂತನ ಸದಸ್ಯರನ್ನಾಗಿ ಆಯ್ಕೆಮಾಡಿದೆ. ಈಗ ಈ ಮೂವರ ಸಲಹಾ ಸಮಿತಿ ಬಿಸಿಸಿಐನ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಕ ಮಾಡುವ ಕೆಲಸ ಮಾಡಲಿದೆ.
ತ್ರಿಸದಸ್ಯ ಸಮಿತಿಯಲ್ಲಿ ಸ್ಥಾನ ಪಡೆದಿರುವ ಅಶೋಕ್ ಮಲ್ಹೋತ್ರಾ ಅವರು 7 ಟೆಸ್ಟ್ ಮತ್ತು 20 ಏಕದಿನ ಪಂದ್ಯಗಳಲ್ಲಿ ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಇತ್ತೀಚೆಗೆ ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಮಿತಿಯ ಮತ್ತೋರ್ವ ಸದಸ್ಯರಾಗಿರುವ ಜತಿನ್ ಪರಾಂಜಪೆ ಅವರು ಭಾರತ ಪರ 4 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜತೆಗೆ ಎಂ.ಎಸ್.ಕೆ ಪ್ರಸಾದ್ ಅವರ ನೇತೃತ್ವದ ಮಾಜಿ ಹಿರಿಯ ಪುರುಷರ ಆಯ್ಕೆ ಸಮಿತಿಯ ಭಾಗವಾಗಿದ್ದರು. ಮದನ್ ಲಾಲ್ ಮತ್ತು ಆರ್.ಪಿ. ಸಿಂಗ್ ಅವರಿಂದ ತೆರವಾದ ಸ್ಥಾನವನ್ನು ಇವರಿಬ್ಬರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | IND SL T20 Series | ಶ್ರೀಲಂಕಾ ಸರಣಿಗೆ ಮತ್ತೆ ಹಿರಿಯ ಆಟಗಾರರಿಗೆ ವಿಶ್ರಾಂತಿ; ಹಾರ್ದಿಕ್ಗೆ ನಾಯಕತ್ವ!