ನವದೆಹಲಿ: ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆಯುವ ಆಟಗಾರರ ವಾರ್ಷಿಕ ವೇತನ ಹೆಚ್ಚಿಸಲು ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಆಟಗಾರ ವೇತನ ಹೆಚ್ಚಾದಲ್ಲಿ ರೋಹಿತ್, ವಿರಾಟ್ ಅವರಂತಹ ಹಿರಿಯ ಆಟಗಾರರು ಸೇರಿದಂತೆ ಭವಿಷ್ಯದ ನಾಯಕರೆಂದು ಪರಿಗಣಿಸಲ್ಪಟ್ಟಿರುವ ಕ್ರಿಕೆಟಿಗರಿಗೂ ದೊಡ್ಡ ಲಾಭವಾಗಲಿದೆ.
“ಕಳೆದ ನಾಲ್ಕು ವರ್ಷಗಳಿಂದ ಟೀಮ್ ಇಂಡಿಯಾ ಆಟಗಾರರ ವೇತನ ಏರಿಕೆ ಕಂಡಿಲ್ಲ. ಆದ್ದರಿಂದ ಬಿಸಿಸಿಐ ಆಟಗಾರರ ವಾರ್ಷಿಕ ವೇತನ ಹೆಚ್ಚಿಸಲು ಆಸಕ್ತಿ ಹೊಂದಿದ್ದು ಶೇ.10ರಿಂದ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಗ್ಗೆ ಡಿಸೆಂಬರ್ 21ಕ್ಕೆ ನಡೆಯಲಿರುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸದ್ಯ ಎ+ ದರ್ಜೆಗೆ 7 ಕೋಟಿ ರೂ. ವೇತನವಿದ್ದು, 10 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ‘ಎ’ ದರ್ಜೆಗೆ 5ರ ಬದಲು 7 ಕೋಟಿ ರೂ., ‘ಬಿ’ ದರ್ಜೆಗೆ 3 ಕೋಟಿ ರೂ. ಬದಲು 5 ಕೋಟಿ ರೂ., ‘ಸಿ’ ದರ್ಜೆಗೆ 1 ಕೋಟಿ ರೂ. ಬದಲಿಗೆ 3 ಕೋಟಿ ರೂ. ವೇತನ ನೀಡುವ ಸಾಧ್ಯತೆ ಎಂದು ತಿಳಿದುಬಂದಿದೆ.
ಸೂರ್ಯ, ಹಾರ್ದಿಕ್ಗೆ ಬಡ್ತಿ ಸಾಧ್ಯತೆ
ಟಿ20 ಕ್ರಿಕೆಟ್ನಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸುತ್ತಿರುವ ಟೀಮ್ ಇಂಡಿಯಾದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಮತ್ತು ಭವಿಷ್ಯದ ಟಿ20 ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಹಾರ್ದಿಕ್ ಪಾಂಡ್ಯ ಅವರ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆ ಇದೆ. ಪ್ರಸ್ತುತ ಅವರು “ಸಿ” ಗ್ರೇಡ್‌ನಲ್ಲಿದ್ದಾರೆ. ವಾರ್ಷಿಕವಾಗಿ 1 ಕೋಟಿ ರೂಪಾಯಿಯನ್ನು ಬಿಸಿಸಿಐನಿಂದ ಸಂಬಳವಾಗಿ ಪಡೆಯುತ್ತಾರೆ. ಇದೀಗ ನೂತನ ವೇತನ ಪರಿಷ್ಕರಣೆಯಲ್ಲಿ ಇವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಉಳಿದಂತೆ ಕೆ.ಎಲ್. ರಾಹುಲ್ ಅವರನ್ನು ಎ+ ಗ್ರೇಡ್‌ಗೆ ಸೇರಿಸಬಹುದು.
ಇದನ್ನೂ ಓದಿ | IND VS BAN | ಮೊದಲ ಟೆಸ್ಟ್, ಬಾಂಗ್ಲಾದೇಶ 150ಕ್ಕೆ ಆಲೌಟ್; ಭಾರತಕ್ಕೆ 254 ರನ್ ಮುನ್ನಡೆ