Site icon Vistara News

ತ್ರಿಪುರಾದಲ್ಲಿ ದಾದಾ ಹೊಸ ಇನಿಂಗ್ಸ್ ಶುರು​; ಸೌರವ್​ ಗಂಗೂಲಿ ಬಿಜೆಪಿ ಸೇರ್ಪಡೆ ವಿಷಯ ಮತ್ತೆ ಮುನ್ನೆಲೆಗೆ!

BCCI Former President Sourav Ganguly Appointed as Tripura Tourism Brand Ambassador

#image_title

ಖ್ಯಾತ ಕ್ರಿಕೆಟಿಗ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರನ್ನು ತ್ರಿಪುರ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್​ (ಬ್ರಾಂಡ್ ರಾಯಭಾರಿ)ನನ್ನಾಗಿ ಮಾಡಲಾಗಿದೆ (Tripura Tourism’s Brand Ambassador). ಒಂದೆರಡು ದಿನಗಳ ಹಿಂದೆ ತ್ರಿಪುರ ಪ್ರವಾಸೋದ್ಯಮ ಸಚಿವ ಸುಶಾಂತಾ ಚೌಧರಿ ಅವರು ಕೋಲ್ಕತ್ತಕ್ಕೆ ಹೋಗಿ, ಸೌರವ್ ಗಂಗೂಲಿಯವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿದ್ದರು. ಅದಾದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.

ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್​ ಆಗುವಂತೆ ಸೌರವ್​ ಗಂಗೂಲಿಯವರಿಗೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್​ ಸಾಹಾ ಅವರು ಕರೆ ಮಾಡಿ ಹೇಳಿದ್ದರು. ಇದೀಗ ಅವರು ಒಪ್ಪಿಗೆ ಕೊಡುತ್ತಿದ್ದಂತೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ ಸಿಎಂ ಮಾಣಿಕ್ ಸಾಹಾ ‘ಭಾರತದ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತ್ರಿಪುರ ಪ್ರವಾಸೋದ್ಯಮಕ್ಕೆ ಬ್ರಾಂಡ್ ಅಂಬಾಸಿಡರ್​ ಆಗಲು ಒಪ್ಪಿಕೊಂಡಿರುವುದು, ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು ಹೆಮ್ಮೆ ತಂದಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಅಭಿಯಾನಗಳಲ್ಲಿ ಅವರು ಪಾಲ್ಗೊಳ್ಳುವುದರಿಂದ ಖಂಡಿತವಾಗಿಯೂ ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ಬರುತ್ತದೆ ಎಂದು ತಿಳಿಸಿದ್ದಾರೆ.

ದಾದಾ ಬಿಜೆಪಿ ಸೇರ್ಪಡೆ?
ಸೌರವ್ ಗಂಗೂಲಿ ಸುತ್ತ ರಾಜಕೀಯ ತಳುಕು ಹಾಕಿಕೊಂಡಿದೆ. ಈಗ ಅವರು ತ್ರಿಪುರ ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್​ ಆಗಿ ನೇಮಕಗೊಳ್ಳುತ್ತಿದ್ದಂತೆ ಮತ್ತೆ ಬಿಜೆಪಿ ಸೇರ್ಪಡೆ ಸುದ್ದಿ ನಿಧಾನಕ್ಕೆ ಹರಡುತ್ತಿದೆ. ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಕ್ರಿಕೆಟ್​ ಐಕಾನ್ ದಾದಾರನ್ನ ಬ್ರಾಂಡ್ ಅಂಬಾಸಿಡರ್ ಮಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಸಿಹಿ ವಿತರಣೆ ಮಾಡಿದ್ದಾರೆ. ಇವರ ಸಂಭ್ರಮ ಅನುಮಾನಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮದ ಬ್ರಾಂಡ್​ ಅಂಬಾಸಿಡರ್​ ಆಗಿ ನೇಮಕ ಮಾಡಿದ್ದಕ್ಕೆ ಇಷ್ಟೆಲ್ಲ ಸಡಗರಿಸುತ್ತಿದ್ದಾರಾ ಅಥವಾ ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ

ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ಈ ಹಿಂದೆಯೇ ಹಬ್ಬಿತ್ತು. ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭೆ ಚುನಾವಣೆ ವೇಳೆ ಈ ವಿಷಯ ಬಲವಾಗಿ ಹರಿದಾಡಿತ್ತು. ಅದಾದ ಮೇಲೆ 2022ರ ಮೇ ತಿಂಗಳಲ್ಲಿ ಸೌರವ್​ ಗಂಗೂಲಿಯವರನ್ನು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ನಿವಾಸಕ್ಕೆ ಔತಣಕ್ಕೆ ಕರೆದಿದ್ದರು. ಅಲ್ಲಿ ಹಲವು ಬಿಜೆಪಿ ಮುಖಂಡರು ಇದ್ದರು. ಇಷ್ಟೆಲ್ಲ ಆದ ಮೇಲೆ ಸೌರವ್​ ಗಂಗೂಲಿ ಬಿಜೆಪಿ ಸೇರ್ಪಡೆ ಪಕ್ಕಾ ಎಂದೇ ಆಗಿತ್ತು. ಆದರೆ ಸೌರವ್ ಗಂಗೂಲಿ ಬಳಿಕ, ತಾವು ಬಿಜೆಪಿ ಸೇರುತ್ತಿಲ್ಲ ಎಂದಿದ್ದರು.

ಇದನ್ನೂ ಓದಿ: ರಾಜಕೀಯಕ್ಕೆ ಕಾಲಿಡ್ತಾರಾ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ?

ಇಷ್ಟೆಲ್ಲ ಆದ ನಂತರ ಬಿಸಿಸಿಐ ಅಧ್ಯಕ್ಷನ ಸ್ಥಾನದಿಂದ 2022ರ ಅಕ್ಟೋಬರ್​ನಲ್ಲಿ ಸೌರವ್ ಗಂಗೂಲಿ ಕೆಳಗೆ ಇಳಿದರು. ಆಗ ತೃಣಮೂಲ ಕಾಂಗ್ರೆಸ್​ ಬಿಜೆಪಿ ವಿರುದ್ಧ ಟೀಕೆ ಮಾಡಿತ್ತು. ಸೌರವ್ ಗಂಗೂಲಿಯವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಅದರ ನಾಯಕರು ಪ್ರಯತ್ನ ಪಟ್ಟರು. ಅದು ಸಾಧ್ಯವಾಗಲಿಲ್ಲ. ಹೀಗಾಗಿ ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಅಧ್ಯಕ್ಷನ ಸ್ಥಾನಕ್ಕೆ ಎರಡನೇ ಅವಧಿಗೆ ಮುಂದುವರಿಯಲು ಬಿಡಲಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದರು. ಇಷ್ಟೆಲ್ಲ ಆದ ಮೇಲೆ ಸೌರವ್​ ಗಂಗೂಲಿ ರಾಜಕೀಯ ಕಣಕ್ಕೆ ಇಳಿಯುವ ವಿಷಯ ತುಸು ತಣ್ಣಗಾಗಿತ್ತು. ಆದರೆ ಮತ್ತೀಗ ಅದಕ್ಕೆ ರೆಕ್ಕೆಪುಕ್ಕ ಬಂದಿದೆ. ತ್ರಿಪುರದಲ್ಲಿ ಪ್ರವಾಸೋದ್ಯಮ ಇಲಾಖೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಬಿಜೆಪಿ ಸೇರ್ಪಡೆಯ ಮೊದಲ ಹಂತವಾ ಎಂಬ ಪ್ರಶ್ನೆ ಎದ್ದಿದೆ.?

Exit mobile version