ನವದೆಹಲಿ: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್‌ನಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ತೋರಿದ ಬಳಿಕ ಬಿಸಿಸಿಐ ಕೆಲವು ಮಹತ್ವದ ಬದಲಾವಣೆ ಮಾಡಿತ್ತು. ಅದರಂತೆ ಕೆಲವು ದಿನಗಳ ಹಿಂದೆ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ಬರ್ಖಾಸ್ತು ಮಾಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಸಿಸಿಐ ತಂಡದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಒಪ್ಪಂದವನ್ನು ನವೀಕರಿಸದೇ ಇರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಪ್ಯಾಡಿ ಆಪ್ಟನ್ ಅವರ ಒಪ್ಪಂದವನ್ನು ನವೀಕರಿಸದ ನಿಟ್ಟಿನಲ್ಲಿ ಮುಂಬರುವ ಬಾಂಗ್ಲಾದೇಶ ಪ್ರವಾಸದ ವೇಳೆ ಅವರನ್ನು ತಂಡದ ಜತೆ ಕಳುಹಿಸುವುದಿಲ್ಲ ಎಂದು ಬಿಸಿಸಿಐ ಆಟಗಾರರಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಟಿ20 ವಿಶ್ವ ಕಪ್‌ನೊಂದಿಗೆ ಪ್ಯಾಡಿ ಆಪ್ಟನ್ ಅವರ ಒಪ್ಪಂದ ಕೂಡ ಅಂತಿಮವಾಗಿತ್ತು. ಆದರೆ ಬಿಸಿಸಿಐ ಅವರಿಗೆ ಈವರೆಗೂ ಹೊಸ ಒಪ್ಪಂದ ನೀಡಿಲ್ಲ. ಮೂಲಗಳ ಪ್ರಕಾರ ಅವರನ್ನು ತಂಡದ ಸಿಬ್ಬಂದಿ ಸ್ಥಾನದಿಂದ ಬಹುತೇಕವಾಗಿ ಕೈಬಿಡಲಾಗಿದೆ. ದಕ್ಷಿಣ ಆಫ್ರಿಕಾ ಮೂಲದ ಪ್ಯಾಡಿ ಅಪ್ಟನ್, ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಆಪ್ತರು. ದ್ರಾವಿಡ್ ಅವರ ಸಲಹೆಯ ಮೇರೆಗೆ ಈ ವರ್ಷದ ಜುಲೈನಲ್ಲಿ ಪ್ಯಾಡಿ ಆಪ್ಟನ್ ಅವರನ್ನು ತಂಡದ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿತ್ತು.
ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ತಂಡದಲ್ಲಿ ಅವರ ಅವಧಿ ಆರಂಭವಾಗಿತ್ತು. ಆದರೆ ಇದೀಗ ಟೀಮ್ ಇಂಡಿಯಾ ಆಟಗಾರರು ಕಳಪೆ ಪದರ್ಶನ ನೀಡುತ್ತಿದ್ದರೂ ಅವರನ್ನು ಮಾನಸಿಕವಾಗಿ ಧೈರ್ಯ ತುಂಬಿ ಬ್ಯಾಟಿಂಗ್ ಫಾರ್ಮ್ಗೆ ಮರಳುವಂತೆ ಮಾಡುವಲ್ಲಿ ಆಪ್ಟನ್ ವಿಫಲರಾಗಿದ್ದಾರೆ ಎಂದು ಬಿಸಿಸಿಐ ಅವರನ್ನು ಕೈಬಿಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | IND VS NZ | ಕಿವೀಸ್ ವಿರುದ್ಧ ದ್ವಿತೀಯ ಏಕ ದಿನ; ಧವನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ