Site icon Vistara News

Rohit vs Virat: ರೋಹಿತ್,ಕೊಹ್ಲಿ ಟಿ20 ಕ್ರಿಕೆಟ್​ ಯುಗಾಂತ್ಯ?; ಬಿಸಿಸಿಐ ನಿಲುವೇನು?

Rohit And Virat

ಮುಂಬಯಿ: ಬಿಸಿಸಿಐ ಮುಂದಿನ ಟಿ20 ವಿಶ್ವಕಪ್ ಸಿದ್ದತೆ ಮಾಡಲು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೇ ಈ ಸಿದ್ಧತೆ ಆರಂಭವಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಮುಖಗಳಿಗೆ ಈ ಸರಣಿಯಲ್ಲಿ ಮಣೆ ಹಾಕಲಾಗಿದೆ. ಇದೀಗ ರೋಹಿತ್​ ಶರ್ಮಾ(Rohit Sharma) ಮತ್ತು ವಿರಾಟ್​ ಕೊಹ್ಲಿ(Virat Kohli) ಅವರು ಮುಂದಿನ ಟಿ20 ಕ್ರಿಕೆಟ್​ ಆಡುವುದಿಲ್ಲ, ಅವರ ಟಿ20 ಕ್ರಿಕೆಟ್​ ಭವಿಷ್ಯ ಬಹುತೇಕ ಅಂತ್ಯ ಕಾಣಲಿದೆ ಎಂಬ ಟಾಕ್​ ಕ್ರಿಕೆಟ್​ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ.

ನಮ್ಮ ಅಭ್ಯಂತರವಿಲ್ಲ

ಹೌದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಅಂತಾರಾಷ್ಟ್ರೀಯ ಭವಿಷ್ಯವನ್ನು ಸ್ವತಂತ್ರವಾಗಿ ನಿರ್ಧರಿಸಲು ಅವರಿಗೆ ಅಧಿಕಾರ ನೀಡಲು ಮುಂದಾಗಿದೆ. ರೋಹಿತ್​ ಮತ್ತು ಕೊಹ್ಲಿ 2024ರಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಯಕೆಯನ್ನು ವ್ಯಕ್ತಪಡಿಸಿದರೆ, ಅವರ ವೈಯಕ್ತಿಕ ಆಯ್ಕೆಗಳನ್ನು ಮಂಡಳಿ ಗೌರವಿಸಲಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಅದು ಅವರ ಇಚ್ಛೆ ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ Rahul Dravid: ಕೋಚ್‌ ಹುದ್ದೆಗೆ ದ್ರಾವಿಡ್‌ ವಿದಾಯ; ಹೊಸ ತರಬೇತುದಾರ ಇವರೇನಾ?

ಆದರೆ, ಮೂಲಗಳ ಪ್ರಕಾರ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಿಂದ ದೂರ ಉಳಿದು ಕೇವಲ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಆದರೆ, ಉಭಯ ಆಟಗಾರರು ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಇದುವರೆಗೆ ಹೇಳಿಲ್ಲ.

ಏಕದಿನ ವಿಶ್ವಕಪ್ ವೇಳೆಯೇ ನಿರ್ಧಾರ

“ರೋಹಿತ್ ಶರ್ಮಾ ಅವರು ಇನ್ನು ಮುಂದೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ. ಐಸಿಸಿ ವಿಶ್ವಕಪ್​ 2023ರ ಟೂರ್ನಿ ಆರಂಭಕ್ಕೂ ಮುನ್ನವೇ ರೋಹಿತ್​ ತಮ್ಮ ಟಿ20 ಕ್ರಿಕೆಟ್​ ಭವಿಷ್ಯದ ಬಗ್ಗೆ ಚರ್ಚಿಸಿದ್ದರು” ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ Hardik Pandya: ಸದ್ಯಕ್ಕಿಲ್ಲ ಹಾರ್ದಿಕ್​ ಪಾಂಡ್ಯ ಕ್ರಿಕೆಟ್​ ಕಮ್​ಬ್ಯಾಕ್​; ಈ ಟೂರ್ನಿಯಲ್ಲಿ ಕಣಕ್ಕೆ!

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್​ನಲ್ಲಿ ನಿರ್ಗಮಿಸಿತ್ತು. ಇದಾದ ಬಳಿಕ ರೋಹಿತ್ ಮತ್ತು ಕೊಹ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಆಡಿಲ್ಲ. ಅಂದಿನಿಂದಲೂ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಹೀಗಾಗಿ ಅಂದಿನ ಟಿ20 ವಿಶ್ವಕಪ್​ ಟೂರ್ನಿಯೇ ಕೊಹ್ಲಿ ಮತ್ತು ರೋಹಿತ್​ಗೆ ಕೊನೆಯ ಪಂದ್ಯ ಆಗಿತ್ತು ಎನ್ನುವುದು ಮೂಲಗಳ ಮಾಹಿತಿ.

ಯುವ ಆಟಗಾರರ ದಂಡೇ ಇದೆ

ರೋಹಿತ್​ ಶರ್ಮಾ ನಂತರ ಭಾರತಕ್ಕೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ನಾಲ್ಕು ಆರಂಭಿಕ ಆಟಗಾರರಿದ್ದಾರೆ. ಇವರೆಲ್ಲರೂ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಓಪನಿಂಗ್​ ಸ್ಥಾನಕ್ಕೆ ತಾವು ಅರ್ಹರು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ವಿರಾಟ್​ ಕೊಹ್ಲಿಯ ಸ್ಥಾನಕ್ಕೂ ಅಯ್ಯರ್​, ರಿಂಕು ಸಿಂಗ್​ ಹೀಗೆ ಕೆಲ ಆಟಗಾರರು ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಅಂಶವನ್ನು ಮುಂದಿಟ್ಟು ಬಿಸಿಸಿಐ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿಲುವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version