ಮುಂಬಯಿ: ಚೇತನ್ ಶರ್ಮಾ ಅವರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ವಜಾಗೊಳಿಸಿದ ಆರು ತಿಂಗಳ ನಂತರ, ಬಿಸಿಸಿಐ ಅವರ ಸ್ಥಾನಕ್ಕಾಗಿ ಬೇರೊಬ್ಬರನ್ನು ತಂದು ಕೂರಿಸಲು ಹುಡುಕಾಟ ಪ್ರಾರಂಭಿಸಿದೆ. ವಿಶ್ವಕಪ್ಗೆ ಕೇವಲ 3 ತಿಂಗಳು ಬಾಕಿ ಇರುವಾಗ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿಯ ಸದಸ್ಯ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಶಿವ ಸುಂದರ್ ದಾಸ್ ಹಂಗಾಮಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೊಸ ಆಯ್ಕೆಗಾರನ ಹುದ್ದೆಗೆ ಬಿಸಿಸಿಐ ಅರ್ಜಿ ಕರೆದಿದೆ. ವೀರೇಂದ್ರ ಸೆಹ್ವಾಗ್ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಜೂನ್ 30 ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕವಾಗಿದೆ.
ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್ ಮತ್ತು ಶಿವ ಸುಂದರ್ ದಾಸ್ ಪ್ರಸ್ತುತ ಸಮಿತಿಯ ಸದಸ್ಯರಾಗಿದ್ದಾರೆ. ಹೊಸ ಸದಸ್ಯ ಈ ತಂಡಕ್ಕೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಏಳು ಟೆಸ್ಟ್ ಪಂದ್ಯಗಳು, ಮೂವತ್ತು ಪ್ರಥಮ ದರ್ಜೆ ಪಂದ್ಯಗಳು, ಹತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಇಪ್ಪತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಅವನು ಅಥವಾ ಅವಳು ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತರಾಗಿರಬೇಕು ಎಂದು ಬಿಸಿಸಿಐ ಹೇಳಿದೆ.
ಆಯ್ಕೆ ಸಮಿತಿ ಹುದ್ದೆಗೆ ಅರ್ಹತೆ ಏನು?
1) ಕನಿಷ್ಠ 7 ಟೆಸ್ಟ್ ಪಂದ್ಯಗಳು
2) ಕನಿಷ್ಠ 30 (ಮೂವತ್ತು) ಪ್ರಥಮ ದರ್ಜೆ ಪಂದ್ಯಗಳು
3) 10 (ಹತ್ತು) ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು
4) 20 (ಇಪ್ಪತ್ತು) ಪ್ರಥಮ ದರ್ಜೆ ಪಂದ್ಯಗಳು.
5) ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತಿ ಹೊಂದಿರಬೇಕು
6) ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರಬಾರದು.
🚨 NEWS 🚨
— BCCI (@BCCI) June 22, 2023
BCCI invites applications for one member of Men’s Selection Committee post.
Details 🔽https://t.co/jOU7ZIwdsl
ಕುಟುಕು ಕಾರ್ಯಾಚರಣೆ ವೇಳೆ ತಂಡದ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಕುರಿತ ರಹಸ್ಯಗಳನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಚೇತನ್ ಶರ್ಮಾ ಅವರನ್ನು ಬಿಸಿಸಿಐ ವಜಾ ಮಾಡಿತ್ತು. 2023ರ ವಿಶ್ವಕಪ್ಗೆ ಕೇವಲ ಮೂರು ತಿಂಗಳುಗಳು ಬಾಕಿ ಇದ್ದು, ತವರಿನಲ್ಲಿ ನಡೆಯುವ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟುವುದು ಬಿಸಿಸಿಐ ಆದ್ಯತೆಯಾಗಿದೆ. ಅದಕ್ಕಾಗಿ ಮಾಜಿ ವೇಗದ ಬೌಲರ್ ಸ್ಥಾನಕ್ಕೆ ಬದಲಿ ಆಯ್ಕೆಗಾರನನ್ನ ಕರೆತರಲು ನಿರ್ಧರಿಸಿದೆ.
ಇದನ್ನೂ ಓದಿ : INDvsWI 2023 : ವಿಂಡೀಸ್ ಪ್ರವಾಸದಲ್ಲಿನ ಪಂದ್ಯಗಳು ಮರು ಆಯೋಜನೆ?
ಅರ್ಹತೆ ಮತ್ತು ಬಿಸಿಸಿಐ ಆಯ್ಕೆದಾರರಿಗೆ ಪಾವತಿಸುವ ಸಂಭಾವನೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಿಸಿಸಿಐ ಕಡಿಮೆ ಮೊತ್ತ ಪಾವತಿಸುತ್ತಿವೆ ಎಂಬುದೇ ಚರ್ಚೆಯ ವಿಚಾರ. ಪ್ರಸಾರ ಮತ್ತು ಪ್ರಾಯೋಜಕತ್ವ ಒಪ್ಪಂದಗಳು ಹೇರಳವಾಗಿ ಸಿಗುತ್ತಿರುವ ಕೃಣ ಮಾಜಿ ಕ್ರಿಕೆಟಿಗರು ಆಯ್ಕೆಗಾರರಾಗಲು ಮುಂದೆ ಬರುತ್ತಿಲ್ಲ. ಅತ್ಯಂತ ಕಷ್ಟಕರ ಕೆಲಸದ ಬದಲು ವೀಕ್ಷಕವಿವರಣೆಯಿಂದ ಹೆಚ್ಚಿನ ಸಂಭಾವನೆ ಸಿಗುವುದೇ ಅದಕ್ಕೆ ಕಾರಣ. ಅದೇ ರೀತಿ ಐದು ವರ್ಷದ ಹಿಂದೆ ನಿವೃತ್ತಿ ಹೊಂದಿರಬೇಕು ಎಂಬ ನಿಯಮವೂ ಅರ್ಹರನ್ನು ದೂರ ಇಡುವಂತಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಬಿಸಿಸಿಐ ಜೂನ್ 30ರ ಗಡುವನ್ನು ನಿಗದಿಪಡಿಸಿದೆ. ಏಷ್ಯಾ ಕಪ್ ಮತ್ತು ವಿಶ್ವಕಪ್ 2023ರ ಹಿನ್ನೆಲೆಯಲ್ಲಿ ಈ ನೇಮಕವು ಪ್ರಮುಖ ಎನಿಸಿಕೊಂಡಿದೆ. ಆಯ್ಕೆ ಸಮಿತಿಯು ಹಿರಿಯ ಆಟಗಾರರನ್ನು ಹಂತ ಹಂತವಾಗಿ ಹೊರಗಇಟ್ಟು ಮತ್ತು ಯುವ ಪಡೆಯ ತಂಡವನ್ನು ಕಟ್ಟಬೇಕಾಗುತ್ತದೆ. ಹೀಗಾಗಿ ಮುಂದಿನ ಆಯ್ಕೆಗಾರರ ಕೆಲಸ ಸ್ವಲ್ಪ ಕಠಿಣ ಎನಿಸಿದೆ.