ಮುಂಬಯಿ: ಏಕ ದಿನ ವಿಶ್ವ ಕಪ್ಗೆ ಆಯೋಜನೆಗೆ ಬಿಸಿಸಿಐ ಸಜ್ಜಾಗುತ್ತಿದೆ. ಆದರೆ, ಸಿದ್ಧತೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಸಾಬೀತಾಗಿದೆ. ಐಪಿಎಲ್ನಲ್ಲಿ ಬ್ಯುಸಿಯಾಗಿರುವ ಬಿಸಿಸಿಐ ವಿಶ್ವ ಕಪ್ಗೆ ಸಿದ್ದತೆ ಮಾಡಿಕೊಳ್ಳುವುದಕ್ಕೆ ಸಮಯವೂ ಸಿಗುತ್ತಿಲ್ಲ. ಆದರೆ, ಪ್ರೇಕ್ಷಕರು ಮಾತ್ರ ಸ್ಟೇಡಿಯಮ್ಗಳಲ್ಲಿ ಮೂಲ ಸೌಕರ್ಯದ ಕೊರತೆ ಇರುವ ಬಗ್ಗೆ ದೂರುಗಳನ್ನು ನೀಡುತ್ತಿದ್ದಾರೆ. ಸತತವಾಗಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ವಿಶ್ವ ಕಪ್ ನಡೆಯಲಿರುವ ಕೆಲವು ಸ್ಟೇಡಿಯಮ್ಗಳ ಸುಧಾರಣೆಗೆ ಮುಂದಾಗಿವ ಎಂಬುದಾಗಿ ವರದಿಯಾಗಿದೆ.
ವಿಶ್ವ ಕಪ್ ಹಿನ್ನೆಲೆಯಲ್ಲಿ ಬಿಸಿಸಿಐ ದೊಡ್ಡ ಮೊತ್ತ ಹಣ ಸಿಗಲಿದೆ. ಕಳೆದ 10 ವರ್ಷದಲ್ಲಿ ನಡೆದ ವಿಶ್ವ ಕಪ್ಗಳಲ್ಲಿ ಅತ್ಯಂತ ಹೆಚ್ಚು ಆದಾಯ ಕ್ರೋಡೀಕರಣಗೊಂಡ ಟೂರ್ನಿ ಇದೆಂಬ ಖ್ಯಾತಿಯೂ ಗಳಿಸಲಿದೆ. ಆದರೆ, ಪಂದ್ಯ ನಡೆಯಲಿರುವ ಕೆಲವೊಂದು ಸ್ಟೇಡಿಯಮ್ಗಳಲ್ಲಿ ಕನಿಷ್ಠ ಮೂಲ ಸೌಕರ್ಯದ ಕೊರತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದ ವೇಳೆ ಡೆಲ್ಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶೌಚಾಲಯ ಸೇರಿದಂತೆ ಹಲವಾರು ಸೌಕರ್ಯಗಳು ಇರಲಿಲ್ಲ ಎಂಬುದಾಗಿ ಪ್ರೇಕ್ಷಕರು ದೂರು ನೀಡಿದ್ದಾರೆ. ಈ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಬಿಸಿಸಿಐ ಕೆಲಸ ಮಾಡಲಿದೆ.
500 ಕೋಟಿ ರೂ. ವೆಚ್ಚ
ಅಂತಾರಾಷ್ಟ್ರೀಯ ಮಟ್ಟದ ಟೂರ್ನಿ ನಡೆಸುವಾಗ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಮ್ ಇಟ್ಟುಕೊಳ್ಳುವುದು ಅತ್ಯಗತ್ಯ.. ಆದರೆ ಮುಂಬಯಿಯ ವಾಂಖೆಡೆ ಸ್ಟೇಡಿಯಮ್ ಸೇರಿದಂತೆ ಪ್ರಮುಖ ಸ್ಟೇಡಿಯಮ್ಗಳಲ್ಲಿ ಮೂಲ ಸೌಕರ್ಯದ ಸಮಸ್ಯೆ ಇತ್ತು. ಇವೆಲ್ಲವನ್ನೂ ಪರಿಹಾರ ಮಾಡಿದರೆ ಮಾತ್ರ ಉತ್ತಮ ರೀತಿಯಲ್ಲಿ ವಿಶ್ವ ಕಪ್ ಆಯೋಜಿಸಲು ಸಾಧ್ಯ ಎಂಬುದು ಬಿಸಿಸಿಐಗೂ ಗೊತ್ತಿದೆ. ಹೀಗಾಗಿ 500 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ಸ್ಟೇಡಿಯಮ್ಗಳ ಸುಧಾರಣೆ ಮುಂದಾಗಿದೆ.
ಡೆಲ್ಲಿ ಸ್ಟೇಡಿಯಮ್ನ ಅವೃದ್ಧಿಗೆ 100 ಕೋಟಿ ರೂಪಾಯಿ ಬೇಕಾಗುತ್ತದೆ ಎನ್ನಲಾಗಿದೆ. ಹೈದರಾಬಾದ್ ಸ್ಟೇಡಿಯಮ್ ರಿಪೇರಿಗೆ 1117 ಕೋಟಿ ರೂಪಾಯಿ. ಈಡನ್ ಗಾರ್ಡನ್ಸ್ ಸ್ಟೇಡಿಯಮ್ ರಿಪೇರಿಗೆ 127 ಕೋಟಿ ರೂಪಾಯಿ. ಮೊಹಾಲಿ ಸ್ಟೇಡಿಯಮ್ ರಿಪೇರಿಗೆ 79 ಕೋಟಿ ರೂಪಾಯಿ ಹಾಗೂ ಮುಂಬಯಿ ಕ್ರಿಕೆಟ್ ಸ್ಟೇಡಿಯಮ್ ರಿಪೇರಿಗೆ 78 ಕೋಟಿ ರೂಪಾಯಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : MS Dhoni : 2011ರ ಒಡಿಐ ವಿಶ್ವ ಕಪ್ ಸಂಭ್ರಮ, ವಾಂಖೆಡೆ ಗ್ಯಾಲರಿಯಲ್ಲಿ ವಿಜಯದ ಸ್ಮಾರಕ
ಒಟ್ಟು 12 ಸ್ಟೇಡಿಯಮ್ಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೊ, ಇಂದೋರ್, ರಾಜ್ಕೋಟ್, ಮುಂಬಯಿ, ಅಹಮದಾಬಾದ್ನಲ್ಲಿ ಪಂದ್ಯಗಳು ನಡೆಯಲಿವೆ.
46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. 2011ರಲ್ಲಿ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ಆಯೋಜನೆಗೊಂಡಿತ್ತು. ಆ ವರ್ಷ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಟ್ರೋಫಿ ಗೆದ್ದಿತ್ತು.