ಮುಂಬಯಿ: ದೇಶದ ಅತ್ಯುನ್ನತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಭಾರತ ತಂಡಕ್ಕೆ ಅತ್ಯುತ್ತಮ ಬೌಲರ್ಗಳನ್ನು ಹುಡುಕುವ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಅದಕ್ಕಾಗಿ ದೇಶಾದ್ಯಂತ ವ್ಯಾಪಕವಾಗಿ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ಅಯೋಜಿಸಲಿದೆ. ಭಾರತ ತಂಡ ಉತ್ತಮ ಬೌಲರ್ಗಳ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಹೊಸ ಯೋಜನೆಗೆ ಕೈ ಹಾಕಿದೆ. ಮ್ಯಾಚ್ ವಿನ್ನರ್ ಬೌಲರ್ಗಳನ್ನು ಸಜ್ಜುಗೊಳಿಸುವುದೇ ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಮುಖ್ಯ ಕಾರ್ಯಸೂಚಿ
ಬೌಲರ್ಗಳು 18ರಿಂದ 23 ವರ್ಷ ವಯಸ್ಸಿನವರಾಗಿರಬೇಕು. ಅಂಥವರನ್ನು ಹುಡುಕಿ ತೆಗೆದು ಅವರಿಗೆ ತರಬೇತಿ ನೀಡುವುದೇ ಯೋಜನೆ ಉದ್ದೇಶವಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉತ್ತಮ ತರಬೇತುದಾರರ ಮೇಲ್ವಿಚಾರಣೆಯಲ್ಲಿ ಹೊಸ ಯುವಕರು ಭಾರತ ತಂಡಕ್ಕೆ ಮಾರಕ ಬೌಲರ್ಗಳಾಗಿ ಪರಿಣಮಿಸಲಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ನಾವು ಬೌಲಿಂಗ್ ವಿಭಾಗದಲ್ಲಿ ಬೆಂಚ್ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಅಂದುಕೊಂಡಿದ್ದೇವೆ. ಆದ್ದರಿಂದ ಹೊಸ ಯೋಜನೆ ಅವಶ್ಯಕತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ : Team India : ಬಿಸಿಸಿಐ ಹೊಸ ನಿಯಮದ ಉರುಳು; ವಿದೇಶಿ ಲೀಗ್ನಿಂದ ಅಂಬಾಟಿ ಎಸ್ಕೇಪ್!
ಪ್ರತಿಭೆ ಅಥವಾ ಉತ್ತಮ ಫಾರ್ಮ್ನಿಂದ ಉತ್ತಮ ಬೌಲರ್ಗಳನ್ನು ಸಜ್ಜಗೊಳಿಸಲು ಸಾಧ್ಯವಿಲ್ಲ. ಆಟಗಾರರ ಫಿಟ್ನೆಸ್ ಬಗ್ಗೆಯೂ ಹೆಚ್ಚಿನ ಗಮನ ನೀಡಲಾಗುವುದು. ಆದ್ದರಿಂದ ಪುರುಷರ ಮತ್ತು ಮಹಿಳಾ ತಂಡಗಳಿಗೆ ಕೆಲವು ನಿಯಮಗಳು ಮತ್ತು ಮಿತಿಗಳನ್ನು ನಿಗದಿಪಡಿಸಲಾಗಿದೆ. ಫಿಟ್ನೆಸ್ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಭಾರತೀಯ ಮಹಿಳಾ ತಂಡದ ಕೆಲವು ಆಟಗಾರರನ್ನು ಬಾಂಗ್ಲಾದೇಶ ಪ್ರವಾಸದಿಂದ ಕೈಬಿಡಲಾಗಿದೆ. ಮಂಡಳಿಯು ಈ ವಿಷಯದಲ್ಲಿ ಕಟ್ಟುನಿಟ್ಟಾಗಿರಲಿದೆ ಎಂದು ಮೂಲಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿವೆ. ಹೀಗಾಗಿ ಫಿಟ್ ಹಾಗೂ ಬೌಲಿಂಗ್ನಲ್ಲಿ ಹೆಚ್ಚು ಪ್ರಖರತೆ ಹೊಂದಿರುವ ಆಟಗಾರರ ಅನ್ವೇಷಣೆಗೆ ಬಿಸಿಸಿಐ ಮುಂದಾಗಿದೆ.
ಮತ್ತೊಂದೆಡೆ 24 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಆಟಗಾರರಿಗೆ ಬಿಸಿಸಿಐ ಅನುದಾನ ನೀಡಲು ನಿರ್ಧರಿಸಿದೆ. ಪ್ರಸ್ತುತ, 25 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದವರು ಅನುದಾನ ಪಡೆಯಲು ಅರ್ಹರಾಗಿದ್ದರು. 50-70 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಆಟಗಾರರಿಗೆ ಸ್ವಯಂ ನಿವೃತ್ತಿ ಪ್ರಯೋಜನಗಳನ್ನು ನೀಡಲು ಬಿಸಿಸಿಐ ಯೋಜಿಸಿದೆ. 75ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದವರು ಮಾತ್ರ ನಿವೃತ್ತಿ ಪ್ರಯೋಜನಗಳನ್ನು ಪಡೆಯುತ್ತಾರೆ. ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
ಸೈಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬಳಕೆಯ ಬಗ್ಗೆ ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಳವಳದ ಮುಖ್ಯ ಕಾರಣವೆಂದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಅಂತಾರಾಷ್ಟ್ರೀಯ ಆಟಗಳಲ್ಲಿ ಬಳಸಲಾಗುವುದಿಲ್ಲ. ಪರಿಣಾಮವಾಗಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್ 2023 ರಲ್ಲಿ ಬಳಸಿದಂತೆ ಪ್ರಯೋಗವಾಗಿ ಬಳಸಲು ಸಜ್ಜಾಗಿದೆ. ಇದರಿಂದ ಆಟಗಾರರ ಪೂರ್ಣ ಸಾಮರ್ಥ್ಯ ಬಯಲಿಗೆ ಬರುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ.