Site icon Vistara News

Team India : ವಿದೇಶಿ ಲೀಗ್​ಗಳಲ್ಲಿ ಆಡುವ ಕ್ರಿಕೆಟಿಗರೆ ಖೆಡ್ಡಾ ತೋಡಲು ಬಿಸಿಸಿಐ ಪ್ಲ್ಯಾನ್​!

team india

ನವದೆಹಲಿ: ಭಾರತ ಕ್ರಿಕೆಟ್ ತಂಡದ (Team India) ಆಟಗಾರರು ವಿದೇಶಿ ಲೀಗ್​​ಗಳಲ್ಲಿ ಆಡುವಂತಿಲ್ಲ ಎಂಬ ನಿಯಮ ಬಿಸಿಸಿಐನಲ್ಲಿ ಜಾರಿಯಲ್ಲಿದೆ. ಹೀಗಾಗಿ ಆಟಗಾರರು ತಂಡದಲ್ಲಿ ಅವಕಾಶ ಪಡೆಯದ ಹೊರತೂ ವಿದೇಶಿ ಲೀಗ್​ಗಳಲ್ಲಿ ಆಡುವಂತಿಲ್ಲ. ಹೀಗಾಗಿ ಭಾರತ ತಂಡದ ಆಟಗಾರರು ಬೇಗ ನಿವೃತ್ತಿ ಪಡೆದುಕೊಂಡು ವಿದೇಶಿ ಲೀಗ್​ಗಳಲ್ಲಿ ಆಡುತ್ತಿದ್ದಾರೆ. ತಮ್ಮ ನಿಯಮಕ್ಕೆ ಸೆಡ್ಡು ಹೊಡೆಯುತ್ತಿರುವ ಆಟಗಾರರಿಗೆ ಪಾಠ ಕಲಿಸಲು ಬಿಸಿಸಿಐ (BCCI) ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಜುಲೈ ಏಳರಂದು ನಡೆಯುವ ಸಭೆಯಲ್ಲಿ ನಿಯಮದಲ್ಲಿ ಮಾರ್ಪಾಟು ಮಾಡಲು ಮುಂದಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಹಾಗೇನಾದರೂ ಆದರೆ, ನಿವೃತ್ತಿ ಪಡೆದ ಹಲವು ವರ್ಷಗಳ ಕಾಲ ಅವರು ವಿದೇಶಿ ಲೀಗ್​ಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಿಸಿಸಿಐ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಪಟ್ಟಿ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

ಈಗ ಅಂತರರಾಷ್ಟ್ರೀಯ ಮತ್ತು ಐಪಿಎಲ್​ನಿಂದ ನಿವೃತ್ತಿ ಘೋಷಿಸುವ ಭಾರತೀಯ ಆಟಗಾರರು ವಿದೇಶಿ ಕ್ರಿಕೆಟ್​ ಲೀಗ್​ಗಳಲ್ಲಿ ಆಡುವುದಕ್ಕೆ ಮುಕ್ತರು. ಮೇ ಕೊನೇಯಲ್ಲಿ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಆಡಿದ್ದ ಅಂಬಾಟಿ ರಾಯುಡು ಮೇಜರ್​ ಕ್ರಿಕೆಟ್​ ಲೀಗ್ ಮತ್ತು ಸ್ಪಿನ್ನರ್​ ಹರ್ಭಜನ್ ಸಿಂಗ್ ಜುಲೈ 20 ರಿಂದ ಪ್ರಾರಂಭವಾಗುವ ಜಿಟಿ 20 ಕೆನಡಾಕ್ಕೆ ಸಹಿ ಹಾಕಿರುವುದು ಉತ್ತಮ ಉದಾಹರಣೆ. ಅದರಲ್ಲೂ ಅಂಬಾಟಿ ರಾಯುಡು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್​​ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಸಹಿ ಹಾಕಿರುವುದು ಬಿಸಿಸಿಐ ಮಂಡಳಿಗೆ ಅಚ್ಚರಿ ಮೂಡಿಸಿದೆ. ನಿವೃತ್ತಿ ಪಡೆದು ಒಂದೇ ಒಂದು ತಿಂಗಳೂ ಕಾಯದೆ ಅವರು ವಿದೇಶಿ ಲೀಗ್​ಗೆ ಸೇರ್ಪಡೆಗೊಂಡಿದ್ದಾರೆ. ಇದು ಮುಂದುವರಿದರೆ ಭಾರತೀಯ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಆಡುವು ಉದ್ದೇಶಕ್ಕೆ ಬೇಗ ರಾಜೀನಾಮೆ ನೀಡುವ ಸಾಧ್ಯತೆ ಇರುತ್ತದೆ. ಇದರಿಂದ ಐಪಿಎಲ್​ ಸೇರಿದಂತೆ ಭಾರತ ತಂಡಕ್ಕೆ ಆಟಗಾರರ ಕೊರತೆ ಎದುರಾಗಬಹುದು ಎಂಬ ಆತಂಕ ಶುರುವಾಗಿದೆ. ಅದಕ್ಕಾಗಿ ಹೊಸ ನಿಯಮ ರೂಪಿಸಲು ಮುಂದಾಗಿದೆ.

ಐಪಿಎಲ್ ಫ್ರಾಂಚೈಸಿ ಮಾಲೀಕರು ಈಗ ವಿದೇಶಿ ಲೀಗ್​ಗಳಲ್ಲಿ ತಂಡಗಳನ್ನು ಹೊಂದಿದ್ದಾರೆ. ಹೀಗಾಗಿ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಆಡುವ ಪವೃತ್ತಿ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ. ಕಳೆದ ವರ್ಷ ನಿವೃತ್ತರಾದ 37 ವರ್ಷದ ರಾಬಿನ್ ಉತ್ತಪ್ಪ ಈ ಜನವರಿಯಲ್ಲಿ ದುಬೈ ಕ್ಯಾಪಿಟಲ್ಸ್ ಪರ ಐಎಲ್​ಟಿ 20ಯಲ್ಲಿ ಕಾಣಿಸಿಕೊಂಡಿದ್ದರು. ವಿಶ್ವದಾದ್ಯಂತ ಟಿ 20 ಲೀಗ್ ಗಳಲ್ಲಿ ಆಡುವ ಬಯಕೆಯನ್ನು ಉತ್ತಪ್ಪ ವ್ಯಕ್ತಪಡಿಸಿದ್ದರು. 2021ರಲ್ಲಿ ನಿವೃತ್ತರಾದ ವಿಶ್ವಕಪ್ ವಿಜೇತ ಯೂಸುಫ್ ಪಠಾಣ್ ಕೂಡ ದುಬೈ ಕ್ಯಾಪಿಟಲ್ಸ್ ಪರ ಆಡಿದ್ದಾರೆ ಮತ್ತು ಲೆಜೆಂಡ್ಸ್ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ : Team India | ವಿದೇಶಿ ಲೀಗ್‌ಗಳಿಗೆ ಆಟಗಾರರನ್ನು ಕಳುಹಿಸಿದರೆ ದೇಶೀಯ ಕ್ರಿಕೆಟ್‌ ಆಡುವವರು ಯಾರು?

ವಿದೇಶಿ ಲೀಗ್​ಗಳಲ್ಲಿ ಆಡುವುದನ್ನು ಬಿಸಿಸಿಐ ವಿರೋಧಿಸುತ್ತಲೇ ಇದೆ. ಈ ವಿಚಾರದಲ್ಲಿ ಬಿಸಿಸಿಐ ಮನವೊಲಿಸಲು ಆಟಗಾರರು, ಏಜೆಂಟರು, ಫ್ರಾಂಚೈಸಿಗಳು, ಕ್ರಿಕೆಟ್ ಮಂಡಳಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ನಿವೃತ್ತಿ ಪಡೆದ ಐದು ವರ್ಷಗಳ ತನಕ ಆಟಬಾರದು ಎಂಬ ನಿಯಮ ಜಾರಿಗೆ ತರುವ ನಿರೀಕ್ಷೆಯಿದೆ. ಆದರೆ, ಈ ನಿಯಮ ಆಟಗಾರರನ್ನು ಇನ್ನಷ್ಟು ಬೇಗ ದೇಶಿಯ ಕ್ರಿಕೆಟ್​ನಿಂದ ನಿವೃತ್ತಿ ನೀಡಲು ಪ್ರೇರೇಪಿಸಬಹುದು ಎನ್ನಲಾಗಿದೆ.

ಇಂಪ್ಯಾಕ್ಟ್​ ಪ್ಲೇಯರ್​ ಅನುಕೂಲ

ಕುತೂಹಲಕಾರಿ ಸಂಗತಿಯೆಂದರೆ, ಕಳೆದ ಐಪಿಎಲ್​ನಲ್ಲಿ ಯಶಸ್ವಿಯಾಗಿ ಬಳಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಟಗಾರರು ತಮ್ಮ ಐಪಿಎಲ್ ವೃತ್ತಿಜೀವನವನ್ನು ತ್ಯಜಿಸುವುದನ್ನು ತಡೆಯುತ್ತದೆ. ಪಿಯೂಷ್ ಚಾವ್ಲಾ ಮತ್ತು ಅಮಿತ್ ಮಿಶ್ರಾ ಅವರಂತಹ ನುರಿತ ಸ್ಪಿನ್ನರ್​ಗಳು ತಮ್ಮ ಪ್ರಮುಖ ಫಿಟ್ನೆಸ್ ಮಾನದಂಡಗಳನ್ನು ಮೀರಿ ಆಡಲು ಅವಕಾಶ ಪಡೆದುಕೊಂಡರಉ. ಏಕೆಂದರೆ ನಿಯಮವು ತಂಡಗಳಿಗೆ ಪಂದ್ಯದ ಸೀಮಿತ ಹಂತದಲ್ಲಿ ಅವರನ್ನು ಬಳಸಲು ಅವಕಾಶ ಮಾಡಿಕೊಟ್ಟಿತು. ಕೇದಾರ್ ಜಾಧವ್ ಅವರಂತಹ ಹಿರಿಯ ಬ್ಯಾಟ್ಸ್​ಮನ್​​ ಕೂಡ ಆಡುವ ಅವಕಾಶ ಪಡೆದರು, ಫೀಲ್ಡಿಂಗ್ ಸಮಯದಲ್ಲಿ ಸೂಕ್ತವಾಗಿ ಬದಲಿ ಆಟಗಾರರನ್ನು ಮೈದಾನಕ್ಕೆ ಇಳಿಸಲಾಯಿತು.

Exit mobile version